ADVERTISEMENT

‘ಆರ್ಥಿಕ ಶಿಸ್ತು ಬೆಳೆಸಿಕೊಳ್ಳಿ’

ಟೆಂಡರ್‌ ಪ್ರೀಮಿಯಂ ಮೊತ್ತ ಬಿಬಿಎಂಪಿಯೇ ಭರಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 20:17 IST
Last Updated 28 ನವೆಂಬರ್ 2019, 20:17 IST

ಬೆಂಗಳೂರು: ಸರ್ಕಾರದ ವಿಶೇಷ ಅನುದಾನದಲ್ಲಿ ಅನುಷ್ಠಾನಗೊಳ್ಳುವ ವಿಶೇಷ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಹೆಚ್ಚುವರಿ ಟೆಂಡರ್‌ ಪ್ರೀಮಿಯಂ ಮೊತ್ತವನ್ನು (ಅಂದಾಜು ವೆಚ್ಚಕ್ಕಿಂತ ಹೆಚ್ಚುವರಿಯಾಗಿ ಪಾವತಿಸಬೇಕಾದ ಹಣ) ಬಿಬಿಎಂಪಿಯೇ ಭರಿಸ ಬೇಕು.ಲಭ್ಯವಿರುವ ಅನುದಾನದಷ್ಟೇ ಕಾಮಗಾರಿ ಕೈಗೆತ್ತಿಕೊಳ್ಳುವ ಮೂಲಕ ಆರ್ಥಿಕ ಶಿಸ್ತನ್ನು ರೂಢಿಸಿಕೊಳ್ಳ
ಬೇಕು ಎಂದು ನಗರಾಭಿವೃದ್ಧಿ ಇಲಾಖೆ ಬಿಬಿಎಂಪಿಗೆ ತಾಕೀತು ಮಾಡಿದೆ.

ಪಾಲಿಕೆಯ ಬಹುತೇಕ ಕಾಮಗಾರಿಗಳ ಟೆಂಡರ್‌ ಅನ್ನು ಅಂದಾಜು ವೆಚ್ಚಕ್ಕಿಂತ ಹೆಚ್ಚು ಮೊತ್ತಕ್ಕೆ ಗುತ್ತಿಗೆ ನೀಡಲಾಗುತ್ತಿದೆ. ಈ ವ್ಯತ್ಯಾಸದ ಮೊತ್ತವನ್ನು ಭರಿಸುವುದಕ್ಕೆ ಪಾಲಿಕೆ ಬಜೆಟ್‌ನಲ್ಲಿ ಯಾವುದೇ ಅನುದಾನ
ವನ್ನು ಗೊತ್ತುಪಡಿಸಿರುವುದಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಸರ್ಕಾರವು ₹ 10ಸಾವಿರ ಕೋಟಿಗೂ ಹೆಚ್ಚು ವಿಶೇಷ ಅನುದಾನವನ್ನು ಪಾಲಿಕೆಗೆ ಮಂಜೂರು ಮಾಡಿದೆ. ಈ ಪೈಕಿ ಕೆಲವು ಕಾಮಗಾರಿಗಳಲ್ಲಿ ಅಂದಾಜು ಮೊತ್ತಕ್ಕಿಂತ ಶೇ 30ಕ್ಕಿಂತಲೂ ಹೆಚ್ಚು ಮೊತ್ತವನ್ನು ಟೆಂಡರ್‌ ಪ್ರೀಮಿಯಂ ರೂಪದಲ್ಲಿ ಪಾವತಿಸಬೇಕಾಗಿದೆ.

ADVERTISEMENT

ಸರ್ಕಾರದ ಅನುದಾನದಲ್ಲಿ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿಗಳಿಗೆ ಸುಮಾರು ಶೇ 29.25ರವರೆಗೆ, ಟೆಂಡರ್‌ಶ್ಯೂರ್ ಕಾಮಗಾರಿಗಳಿಗೆ ಶೇ 37.86ರವರೆಗೆ ಹಾಗೂ ಕೆರೆ ಅಭಿವೃದ್ಧಿ ಕಾಮಗಾರಿಗಳಿಗೆ ಶೇ 14.45ರವರೆಗೆ ರಾಜಕಾಲುವೆ ಕಾಮಗಾರಿಗಳಿಗೆ ಶೇ 30.82ರವರೆಗೆ ಹಾಗೂ ಗ್ರೇಡ್‌ಸಪರೇಟರ್‌ ಕಾಮಗಾರಿಗಳಲ್ಲಿ ಶೇ 24.8ರವರೆಗೆ ಹೆಚ್ಚುವರಿ ಪ್ರೀಮಿಯಂ ಪಾವತಿಸಲಾಗುತ್ತಿದೆ. ಹೆಚ್ಚುವರಿ ಮೊತ್ತವನ್ನೂ ನಗರಾಭಿವೃದ್ಧಿ ಇಲಾಖೆಯೇ ಭರಿಸಬೇಕು ಎಂದು ಪಾಲಿಕೆ ಒತ್ತಾಯಿಸಿತ್ತು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸರ್ಕಾರದ ಅನುದಾನದಲ್ಲಿ ಅನುಷ್ಠಾನಗೊಳ್ಳುವ ವಿಶೇಷ ಮೂಲಸೌಕರ್ಯ ಅಭಿವೃದ್ಧಿ, ನಗರೋತ್ಥಾನ, ಕೆರೆ ಅಭಿವೃದ್ಧಿ ಯೋಜನೆಗಳಿಗೆ ಪಾಲಿಕೆ ನಿಧಿಯಿಂದ ಭರಿಸಬೇಕಾದ ಹೆಚ್ಚುವರಿ ಟೆಂಡರ್‌ ಪ್ರೀಮಿಯಂ ಮೊತ್ತಕ್ಕೆ ಸರ್ಕಾರದಿಂದಲೇ ಅನುದಾನ ಒದಗಿಸುವಂತೆ ಕೋರಿ ಬಿಬಿಎಂಪಿ ಆಯುಕ್ತರು 2019ರ ಜುಲೈನಲ್ಲಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ‘ಕ್ರಿಯಾಯೋಜನೆ ಕುರಿತ ಆದೇಶದಲ್ಲೇ ವಿಧಿಸಿರುವ ಷರತ್ತುಗಳ ಪ್ರಕಾರ ಟೆಂಡರ್‌ ಪ್ರೀಮಿಯಂ ಮೊತ್ತವನ್ನು ಭರಿಸಲು ಬಿಬಿಎಂಪಿ ಸ್ವಂತ ಸಂಪನ್ಮೂಲ ಬಳಸಬೇಕು. ಇದಕ್ಕೆ ಇಲಾಖೆಯಿಂದ ಅನುದಾನ ನೀಡಲು ಸಾಧ್ಯವಿಲ್ಲ. ನಗರದ ಅವಶ್ಯಕತೆಗಳಿಗೆ ಅನುಗುಣವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅಸಾಧ್ಯವಾಗಿರುವ ಕಾರಣ 1976ರ ಕೆಎಂಸಿ ಕಾಯ್ದೆಯಡಿ ಖಾತರಿ‌ಪಡಿಸಿದ ಪಾಲಿಕೆ ನಿಧಿಗೆ ಹೊರತಾದ ಅನುದಾನವನ್ನು ಸರ್ಕಾರ ನೀಡುತ್ತಿದೆ. ಹಾಗಾಗಿ, ಟೆಂಡರ್‌ ಪ್ರೀಮಿಯಂ ಮೊತ್ತವನ್ನು ಭರಿಸುವುದಕ್ಕಾಗಿ ಬಿಬಿಎಂಪಿ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಕಾಯ್ದಿರಿಸಬೇಕು ಎಂದು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.