ADVERTISEMENT

ದೇವರ ಮೊರೆಹೋದ ಭಕ್ತರು, ಅಭಿಮಾನಿಗಳು

ಪೇಜಾವರ ಶ್ರೀಗಳ ಆರೋಗ್ಯ ಸುಧಾರಣೆಗೆ ಪ್ರಾರ್ಥನೆ, ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 15:07 IST
Last Updated 20 ಡಿಸೆಂಬರ್ 2019, 15:07 IST
   

ಉಡುಪಿ: ಪೇಜಾವರ ಮಠದ ಯತಿಗಳಾದ ವಿಶ್ವೇಶತೀರ್ಥರು ಆಸ್ಪತ್ರೆಗೆ ದಾಖಲಾದ ಸುದ್ದಿ ತಿಳಿಯುತ್ತಿದ್ದಂತೆ ಕೃಷ್ಣಮಠದ ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಶ್ರೀಕೃಷ್ಣನ ದರ್ಶನಕ್ಕೆ ಬಂದ ಭಕ್ತರು ಶ್ರೀಗಳ ಆರೋಗ್ಯ ಚೇತರಿಕೆಗೆ ದೇವರಲ್ಲಿ ಪ್ರಾರ್ಥಿಸುತ್ತಿದ್ದ ದೃಶ್ಯ ಕಂಡುಬಂತು.

ದೇವರ ಮೊರೆ:

ಶ್ರೀಗಳು ಗುಣಮುಖರಾಗುವಂತೆ ರಾಜ್ಯದ ಹಲವೆಡೆ ಪೂಜೆ, ಪ್ರಾರ್ಥನೆಗಳು ನೆರವೇರಿದವು. ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠ ಹಾಗೂ ದೇಶದಾದ್ಯಂತ ಇರುವ 84 ಮಠದ ಶಾಖೆಗಳಲ್ಲಿ ವಿಶೇಷ ಜಪ, ಹವನ ಭಜನೆ, ಪ್ರಾರ್ಥನೆಗಳು ನೆರವೇರಿದವು.

ADVERTISEMENT

ಅನಾರೋಗ್ಯ ಸುದ್ದಿ ತಿಳಿದು‌ ದಿಗ್ಭ್ರಮೆ ವ್ಯಕ್ತಪಡಿಸಿದ ಯೋಗಗುರು ಬಾಬಾ ರಾಮ್ ದೇವ್‌,ಶ್ರೀಗಳ ಆರೋಗ್ಯ ಸುಧಾರಣೆಗೆ ಹರಿದ್ವಾರದ ಪತಂಜಲಿ ಯೋಗ ಪೀಠದಲ್ಲಿ ವಿಶೇಷ ಭಜನೆ, ಪ್ರಾರ್ಥನೆ ನಡೆಯಿತು ಎಂದು ತಿಳಿಸಿದರು.

ಮೂಲ ರಾಮಚಂದ್ರದೇವರ ಮತ್ತು ವ್ಯಾಸಮುಷ್ಠಿಗಳ ಸನ್ನಿಧಾನದಲ್ಲಿ ಸತ್ಯಾತ್ಮತೀರ್ಥ ಶ್ರೀಗಳ ನೇತೃತ್ವದಲ್ಲಿ ವಿದ್ವಾಂಸರು ಹಾಗೂ ವಿದ್ಯಾರ್ಥಿಗಳುವಾಯುಸ್ತುತಿ, ಮನ್ಯುಸೂಕ್ತ ಪುರಶ್ಚರಣೆ, ಸುಂದರ ಕಾಂಡ ಪಾರಾಯಣವನ್ನು 11 ಬಾರಿ ಪಠಿಸಿದರು.‌

ಸುಬುಧೇಂದ್ರ ತೀರ್ಥರ ಆದೇಶದಂತೆ ಮಂತ್ರಾಲಯ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದ ಋಗ್ವೆದ ಯಜುರ್ವೇದ ಸಂಹಿತಾ ಪಾರಾಯಣ, ಸಹಸ್ರನಾಮ ಹಾಗೂ ವಾಯುಸ್ತುತಿ ಗುರುಸ್ತೊತ್ರ ಪಾರಾಯಣ ನಡೆಸಿತು.

ಉಡುಪಿ ಜಿಲ್ಲಾ ನಾಗರಿಕ ಸಮಿತಿ ಹಾಗೂ ಪಂಚರತ್ನ ಸೇವಾ ಟ್ರಸ್ಟ್‌ನಿಂದ ಮಾರುತಿ ವಿಥಿಕಾ ರಸ್ತೆಯಲ್ಲಿ ಭಜನೆ ಹಾಗೂ ಹರಿನಾಮ ಸಂಕೀರ್ತನೆ ನಡೆಯಿತು. ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯರಾದ ಕೆ.ಬಾಲಗಂಗಾಧರ್ ರಾವ್, ಸುಧಾಕರ್ ದೇವಾಡಿಗ, ಡೇವಿಡ್, ತಾರಾನಾಥ್ ಮೇಸ್ತ ಶಿರೂರು ಇದ್ದರು.

ನಾಡಿನ ಹಲವು ಮಠ, ಸಂಸ್ಥಾನ ದೇಗುಲಗಳಲ್ಲಿಯೂ ಶ್ರೀಗಳ ಆರೋಗ್ಯ ಚೇತರಿಕೆಗೆ ಪ್ರಾರ್ಥನೆ ನಡೆಯಿತು.

ಗಣ್ಯರ ಭೇಟಿ:ಶ್ರೀಗಳ ಅನಾರೋಗ್ಯ ಸುದ್ದಿ ತಿಳಿಯುತ್ತಿದ್ದಂತೆ ಗಣ್ಯರು, ಮಠಾಧೀಶರು, ರಾಜಕೀಯ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಶ್ರೀಗಳ ಆರೋಗ್ಯ ವಿಚಾರಿಸಿದರು.

ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಬಳಿಕ ಮಾತನಾಡಿ, ನಡೆದಾಡುವ ದೇವರಾದ ಪೇಜಾವರ ಶ್ರೀಗಳು ಅನಾರೋಗ್ಯ ದುಃಖ ತಂದಿದೆ. ಆರೋಗ್ಯ ಸ್ಥಿರವಾಗಿದ್ದು, ಬಹುಬೇಗ ಚೇತರಿಸಿಕೊಳ್ಳಬೇಕು ಎಂಬುದು ಲಕ್ಷಾಂತರ ಅಭಿಮಾನಿಗಳ ಭಕ್ತರ ಆಶಯ ಎಂದರು.

ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಆಸ್ಪತ್ರೆಗೆ ಭೇಟಿನೀಡಿದ ಬಳಿಕ ಮಠಕ್ಕೆ ತೆರಳಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಶ್ರೀಗಳ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿ, ಸ್ವಾಮೀಜಿ ಆರೋಗ್ಯದಲ್ಲಿಚೇತರಿಕೆ ಕಂಡುಬರುತ್ತಿದೆ. ಬಹುಬೇಗನೆ ಗುಣಮುಖರಾಗಿ ಮತ್ತೆ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವ ವಿಶ್ವಾಸವಿದೆ’ ಎಂದರು.

ಎಡನೀರು ಮಠದಎಡನೀರು ಮಠದ ಕೇಶವಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಪೇಜಾವರ ಶ್ರೀಗಳ ಮೇಲೆ ಬಹಳ ಅಭಿಮಾನ, ಗೌರವ ಹೊಂದಿದ್ದು, ಅನಾರೋಗ್ಯ ವಿಚಾರ ತಿಳಿದ ಕೂಡಲೇ ಮನಸ್ಸು ತಡೆಯದೆ ಭೇಟಿನೀಡಿದ್ದೇನೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ಹೇಳಿರುವುದು ಸಮಾಧಾನ ತಂದಿದೆ ಎಂದರು.

ಶಾಸಕ ರಘುಪತಿ ಭಟ್‌ ಮಾತನಾಡಿ,ಭಕ್ತರು, ಶ್ರೀಗಳ ಅಭಿಮಾನಿಗಳುಮನೆಯಿಂದಲೇ ಪ್ರಾರ್ಥಿಸಿ ಎಂದು ಮನವಿ ಮಾಡಿದರು.

ಪೇಜಾವರ ಮಠದ ಕಿರಿಯ ವಿಶ್ವಪ್ರಸನ್ನ ಶ್ರೀಗಳು, ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ,ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಸ್ವಾಮೀಜಿ, ಸಿರಿಗೆರೆ ಮಠದ ತರಳಬಾಳು ಶ್ರೀಗಳು, ಕನ್ಯಾಡಿಯ ಬ್ರಹ್ಮಾನಂದ
ಸರಸ್ವತಿ ಸ್ವಾಮೀಜಿ,ಕಲ್ಲಡ್ಕ ಪ್ರಭಾಕರ ಭಟ್‌, ಡಾ.ಮೋಹನ ಆಳ್ವ, ಸಚಿವ ಈಶ್ವರಪ್ಪ, ಶಾಸಕ ಲಾಲಾಜಿ ಆರ್‌.ಮೆಂಡನ್‌, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಜಿಲ್ಲಾಧಿಕಾರಿ ಜಿ.ಜಗದೀಶ್‌, ಎಸ್‌ಪಿನಿಶಾ ಜೇಮ್ಸ್‌, ಜಿಲ್ಲಾ ಪಂಚಾಯಿತಿ ಸಿಇಒ ಪ್ರೀತಿ ಗೆಹ್ಲೋಟ್‌ ಆಸ್ಪತ್ರೆಗೆ ಭೇಟಿ ನೀಡಿದರು.

ಆಸ್ಪತ್ರೆಗೆ ದಾಖಲಾಗುವ ಮುನ್ನ...

ಸದಾ ಲವಲವಿಕೆಯಿಂದ ಓಡಾಡುವ ಪೇಜಾವರ ಸ್ವಾಮೀಜಿಗೆ 89ರ ಇಳಿ ವಯಸ್ಸಿನಲ್ಲಿಯೂ ವಿರಮಿಸದೆ ದೇಶದೆಲ್ಲೆಡೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಎರಡು ದಿನಗಳ ಹಿಂದಷ್ಟೆ ತಿರುಪತಿಗೆ ಭೇಟಿ ನೀಡಿದ್ದರು. ಗುರುವಾರ ಬೆಳಿಗ್ಗೆ ಹುಟ್ಟೂರು ಸುಬ್ರಹ್ಮಣ್ಯದ ರಾಮಕುಂಜಕ್ಕೆ ತೆರಳಿದ್ದರು. ಬಳಿಕ ಸಂಜೆ 4ಕ್ಕೆ ಪಾಜಕದಲ್ಲಿರುವ ಆನಂದ ತೀರ್ಥ ವಿದ್ಯಾಲಯದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 6ಕ್ಕೆ ರಾಜಾಂಗಣದಲ್ಲಿ ಮಹಾಭಾರತ ಪ್ರವಚನ ಆಲಿಸಿದ್ದರು. ಬಳಿಕ ಯಕ್ಷಗಾನವನ್ನೂ ನೋಡಿದ್ದರು. ಈ ಸಂದರ್ಭ ಶ್ರೀಗಳಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಾಗ ಮಠಕ್ಕೆ ತೆರಳಿ ವಿಶ್ರಾಂತಿ ಪಡೆದರು. ನಸುಕಿನ ವೇಳೆ ಉಸಿರಾಟದ ಸಮಸ್ಯೆ ತೀವ್ರಗೊಂಡು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಮಠದ ಸಿಬ್ಬಂದಿ ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.