ADVERTISEMENT

ಚಿಕಿತ್ಸೆ ನೀಡದ ಆಸ್ಪತ್ರೆ ವಿರುದ್ಧ ಕಠಿಣ ಕ್ರಮ; ಡಿಜಿ–ಐಜಿಪಿ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 15:05 IST
Last Updated 18 ಏಪ್ರಿಲ್ 2021, 15:05 IST
ಪ್ರವೀಣ್ ಸೂದ್
ಪ್ರವೀಣ್ ಸೂದ್   

ಬೆಂಗಳೂರು: ಪೊಲೀಸರಲ್ಲಿ ಕೊರೊನಾ ಸೋಂಕು ಹರಡುವಿಕೆ ತಡೆಯುವುದಕ್ಕಾಗಿ ಕೆಲ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ– ಐಜಿಪಿ) ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ.

ಈ ಬಗ್ಗೆ ರಾಜ್ಯದ ಎಲ್ಲ ಕಮಿಷನರ್ ಹಾಗೂ ಜಿಲ್ಲಾ ಎಸ್ಪಿಗಳಿಗೆ ತುರ್ತು ಸಂದೇಶ ಕಳುಹಿಸಿದ್ದಾರೆ.

‘ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅವರ ಕುಟುಂಬದವರು ಜಾಗೃತಿ ವಹಿಸಬೇಕು. 45 ವರ್ಷ ಮೇಲ್ಪಟ್ಟ ಕುಟುಂಬದ ಸದಸ್ಯರಿಗೆ ಮೊದಲನೇ ಹಾಗೂ ಎರಡನೇ ಲಸಿಕೆಯನ್ನು ತಪ್ಪದೇ ಹಾಕಿಸಬೇಕು’ ಎಂದೂ ಹೇಳಿದ್ದಾರೆ.

ADVERTISEMENT

‘ಪ್ರತಿಯೊಂದು ಠಾಣೆ, ಅಧಿಕಾರಿಗಳ ಕಚೇರಿಗಳ ಒಳ ಹಾಗೂ ಹೊರ ಆವರಣವನ್ನು ನಿತ್ಯವೂ ಸ್ಯಾನಿಟೈಸ್ ಮಾಡಬೇಕು. ಸಿಬ್ಬಂದಿಯನ್ನು ಮೂರು ಪಾಳಿಯಲ್ಲಿ ಕರ್ತವ್ಯಕ್ಕೆ ನೇಮಿಸಿ ಮೂಲ ಸೌಕರ್ಯ ಒದಗಿಸಬೇಕು. ಅಧಿಕಾರಿ, ಸಿಬ್ಬಂದಿ ಕರ್ತವ್ಯದ ಸಮಯದಲ್ಲಿ ಮಾಸ್ಕ್, ಫೇಸ್‌ಶೀಲ್ಡ್ ಧರಿಸುವುದು ಕಡ್ಡಾಯ. ಠಾಣೆ ಮತ್ತು ಕಚೇರಿಗಳ ಮುಂಭಾಗದಲ್ಲೇ ಸಾರ್ವಜನಿಕರ ಭೇಟಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು’ ಎಂದೂ ಪ್ರವೀಣ್ ಸೂದ್ ತಿಳಿಸಿದ್ದಾರೆ.

‘ಪೊಲೀಸರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಸೋಂಕು ತಗುಲಿದರೆ ಅವರಿಗೆ ಗುಣಮಟ್ಟದ ವೈದ್ಯಕೀಯ ಸೌಲಭ್ಯ ಹಾಗೂ ಚಿಕಿತ್ಸೆ ದೊರಕುವಂತೆ ನಿಗಾ ವಹಿಸಲು ಸಮನ್ವಯಾಧಿಕಾರಿ ನೇಮಿಸಬೇಕು. ಪೊಲೀಸರಿಗೆ ಹಾಗೂ ಅವರ ಕುಟುಂಬದವರಿಗೆ ಆರೋಗ್ಯ ಭಾಗ್ಯ ಯೋಜನೆಯಡಿ ಚಿಕಿತ್ಸೆ ನೀಡಲು ನಿರಾಕರಿಸುವ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.