ADVERTISEMENT

‘ಅಕ್ರಮ ಶಸ್ತ್ರಾಸ್ತ್ರ ಪತ್ತೆಗೆ ಕಾರ್ಯಾಚರಣೆ: ಪ್ರವೀಣ್‌ ಸೂದ್‌

ಕಲಬುರ್ಗಿಯಲ್ಲಿ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 17:43 IST
Last Updated 4 ನವೆಂಬರ್ 2020, 17:43 IST
ಪ್ರವೀಣ್ ಸೂದ್
ಪ್ರವೀಣ್ ಸೂದ್   

ಕಲಬುರ್ಗಿ: ರಾಜ್ಯದಲ್ಲಿ ಹೆಚ್ಚುತ್ತಿರುವ ಅಕ್ರಮ ಶಸ್ತ್ರಾಸ್ತ್ರಗಳ ಸಂಗ್ರಹಣೆ ಮಟ್ಟ ಹಾಕಲು ಕಾರ್ಯಾಚರಣೆ ನಡೆಸಲಾಗುವುದು ಎಂದು ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್ ಸೂದ್‌ ತಿಳಿಸಿದರು.

ನಗರದಲ್ಲಿ ಬುಧವಾರ ಈಶಾನ್ಯ ವಲಯದ ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಕ್ರಮ ಪಿಸ್ತೂಲ್, ಗನ್‌ನಂತಹ ಶಸ್ತ್ರಾಸ್ತ್ರಗಳನ್ನು ಇರಿಸಿಕೊಂಡು ಓಡಾಡುವವರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಬೇರೆ ರಾಜ್ಯಗಳಿಂದ ಬರುವ ಶಸ್ತ್ರಾಸ್ತ್ರಗಳ ಸಾಗಾಟವನ್ನೂ ತಡೆಯಲಾಗುವುದು. ಇದಕ್ಕಾಗಿ ತಂಡಗಳನ್ನು ರಚಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಡ್ರಗ್ಸ್ ಪ್ರಕರಣದಲ್ಲಿ ಸಿನಿಮಾ ರಂಗದ ಪ್ರಮುಖರು ಭಾಗಿಯಾಗಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸೂದ್, ‘ಪ್ರಮುಖರು, ಪ್ರಮುಖರಲ್ಲದವರು ಎಂಬ ವಿಂಗಡಣೆಯನ್ನು ನಾವು ಮಾಡುವುದಿಲ್ಲ. ಆರೋಪಿಗಳು ಆರೋಪಿಗಳೇ. ಡ್ರಗ್ಸ್ ದಂಧೆಯಲ್ಲಿ ಸಿಲುಕಿದವರನ್ನು ಜೈಲಿಗೆ ಕಳಿಸಲಾಗಿದ್ದು, ಈ ಪ್ರಕ್ರಿಯೆ ಮುಂದುವರಿಯಲಿದೆ. ಡ್ರಗ್ಸ್‌‌ ಪೆಡ್ಲರ್‌ಗಳ ವಿರುದ್ಧ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಗರಿಷ್ಠ ಪ್ರಕರಣಗಳು ದಾಖಲಾಗಿವೆ’ಎಂದು ಸ್ಪಷ್ಟಪಡಿಸಿದರು.

ADVERTISEMENT

ಇಲಾಖೆಯಲ್ಲಿ 20 ಸಾವಿರ ಹುದ್ದೆಗಳು ಖಾಲಿ ಇದ್ದು, ಪ್ರಸಕ್ತ ವರ್ಷ 8 ಸಾವಿರ ಕಾನ್‌ಸ್ಟೆಬಲ್‌ಗಳನ್ನು ನೇಮಕ ಮಾಡಲಾಗುತ್ತಿದೆ. 500 ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗಳ ನೇಮಕಾತಿ ಪ್ರಕ್ರಿಯೆ ನಡೆದಿದೆ. ಶೇ 90ರಷ್ಟು ಖಾಲಿ ಹುದ್ದೆಗಳನ್ನು ಎರಡು ವರ್ಷಗಳಲ್ಲಿ ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.

‘ಮಹಾರಾಷ್ಟ್ರ ಮೂಲದವರು ಭಾಗಿ ಶಂಕೆ’

ವಿಜಯಪುರ ಜಿಲ್ಲೆಯಲ್ಲಿ ಮಹಾದೇವ ಭೈರಗೊಂಡ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ ತನಿಖೆ ಚುರುಕುಗೊಳಿಸಲಾಗಿದೆ. ಮಹಾರಾಷ್ಟ್ರ ಮೂಲದವರು ಗುಂಡಿನ ದಾಳಿ ನಡೆಸಿರುವ ಶಂಕೆ ಇದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು. ಚಡಚಣದಲ್ಲಿ ದಶಕಗಳಿಂದಲೂ ಎರಡು ಗುಂಪುಗಳ ನಡುವೆ ವೈಮಷ್ಯವಿರುವುದು ಎಲ್ಲರಿಗೂ ಗೊತ್ತಿದೆ. ಈ ಕೃತ್ಯಕ್ಕೆ ಕೊನೆ ಹಾಡಲು ಆದ್ಯತೆ ನೀಡಿ ಕೆಲಸ ಮಾಡುವಂತೆ ಅಲ್ಲಿನ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪ್ರವೀಣ್ ಸೂದ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.