ADVERTISEMENT

ಧರ್ಮಸ್ಥಳದ ಘನತೆ ಕುಗ್ಗಿಸಲು ಯತ್ನ: ವಿಎಚ್‌ಪಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 16:01 IST
Last Updated 9 ಆಗಸ್ಟ್ 2025, 16:01 IST
ಧರ್ಮಸ್ಥಳ ಮಂಜುನಾಥ ಸ್ವಾಮಿ ದೇಗುಲ
ಧರ್ಮಸ್ಥಳ ಮಂಜುನಾಥ ಸ್ವಾಮಿ ದೇಗುಲ   

ಬೆಂಗಳೂರು: ಧರ್ಮಕ್ಕೆ ಪ್ರತಿರೂಪವಾಗಿರುವ ಧರ್ಮಸ್ಥಳಕ್ಕೆ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಹಿಂದೂ ವಿರೋಧಿ ಶಕ್ತಿಗಳು ಅಪಪ್ರಚಾರವೆಸಗುವ ಮೂಲಕ ಕ್ಷೇತ್ರದ ಗೌರವ ಹಾಗೂ ಘನತೆಯನ್ನು ಕುಗ್ಗಿಸಲೆತ್ನಿಸುತ್ತಿರುವುದು ಅಕ್ಷಮ್ಯ ಅಪರಾಧ ಎಂದು ವಿಶ್ವ ಹಿಂದೂ ಪರಿಷದ್ ಪ್ರಾಂತ ಅಧ್ಯಕ್ಷ ದೀಪಕ್ ರಾಜ್ ಗೋಪಾಲ್ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯವು, ದೇಶದ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಪೈಕಿ ಒಂದಾಗಿದೆ. ಕೋಟ್ಯಂತರ ಭಕ್ತರು ನಿತ್ಯ ದೇವರ ದರ್ಶನ ಪಡೆಯುತ್ತಾರೆ’ ಎಂದು ಹೇಳಿದ್ದಾರೆ.

‘2012ರಲ್ಲಿ ನಡೆದ ಸೌಜನ್ಯಾಳ ಹತ್ಯೆಗೆ ಸಂಬಂಧಿಸಿ ಸಮಗ್ರವಾದ ಪಾರದರ್ಶಕ ತನಿಖೆ ನಡೆದು ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಪರಿಷತ್ ಆಗ್ರಹಿಸುತ್ತಲೇ ಬಂದಿದೆ. ಇದರ ನಡುವೆ ಅನಾಮಿಕನೊಬ್ಬ, ‘ತಾನು 10-20 ವರ್ಷಗಳ ಹಿಂದೆ ನೂರಾರು ಹೆಣಗಳನ್ನು ಧರ್ಮಸ್ಥಳದ ಕಾಡುಗಳಲ್ಲಿ ಹೂತಿದ್ದೇನೆ’ ಎಂಬ ಹೇಳಿಕೆಯನ್ನು ಆಧರಿಸಿ ಕ್ಷೇತ್ರದ ಘನತೆಗೆ ಹಾಗೂ ಹಿಂದೂ ಧಾರ್ಮಿಕ ನಂಬಿಕೆಗೆ ಚ್ಯುತಿ ತರುವ ಸಂಚನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಕ್ಷೇತ್ರದ ವಿರುದ್ಧ ಷಡ್ಯಂತ್ರ ಮಾಡಿ ಸನಾತನ ಧರ್ಮದೊಳಗೆ ಬಿರುಕು ಮೂಡಿಸಲು ಯತ್ನಿಸುತ್ತಿರುವವರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು. ಇತ್ತೀಚೆಗೆ ನಡೆಯುತ್ತಿರುವ ಎಲ್ಲಾ ಘಟನೆಗಳ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಆಗ್ರಹಿಸಿದ್ದಾರೆ.

ಹಿಂದೂ ಧಾರ್ಮಿಕ ಕೇಂದ್ರಗಳ ವಿರುದ್ಧ ಪಿತೂರಿ ಮಾಡುವ ಎಲ್ಲಾ ಶಕ್ತಿಗಳ ವಿರುದ್ಧ ಎಲ್ಲಾ ರೀತಿಯ ಹೋರಾಟ ಮಾಡಲು ಸಿದ್ಧ ಎಂದು ಪರಿಷತ್ತಿನ ನಿಕಟಪೂರ್ವ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.