ADVERTISEMENT

ಧರ್ಮಸ್ಥಳ ಪ್ರಕರಣ: ಕೇಂದ್ರ ಗೃಹ ಸಚಿವ ‘ಅಮಿತ್‌ ಶಾ’ಗೆ ಬಿಜೆಪಿ ನಿಯೋಗದಿಂದ ವರದಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 16:23 IST
Last Updated 8 ಸೆಪ್ಟೆಂಬರ್ 2025, 16:23 IST
   

ನವದೆಹಲಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ಬಿಜೆಪಿ ನಿಯೋಗವು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಸೋಮವಾರ ರಾತ್ರಿ ಇಲ್ಲಿ ಭೇಟಿ ಮಾಡಿ ಧರ್ಮಸ್ಥಳ ಪ್ರಕರಣದ ಬಗ್ಗೆ ವರದಿ ಸಲ್ಲಿಸಿತು. 

ಶಾ ಅವರೊಂದಿಗೆ ಸುಮಾರು 30 ನಿಮಿಷ ಚರ್ಚೆ ನಡೆಸಿದ ನಿಯೋಗವು, ‘ಧರ್ಮಸ್ಥಳದ ವಿರುದ್ಧದ ಪಿತೂರಿಯಲ್ಲಿ ಹೊರ ರಾಜ್ಯದ ಕೆಲವರ ಕೈವಾಡ ಇದೆ. ಈ ಬಗ್ಗೆ ಉನ್ನತ ತನಿಖೆ ನಡೆಸುವ ಅಗತ್ಯ ಇದೆ’ ಎಂದು ಹೇಳಿತು. 

‘ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆದಿದೆ. ಆದರೆ, ಅದರ ಹಿಂದಿರುವ ರೂವಾರಿಗಳನ್ನು ಹುಡುಕುವ ಕೆಲಸವನ್ನು ಕಾಂಗ್ರೆಸ್‌ ಮಾಡಿಲ್ಲ. ಈ ಘಟನೆ ಬಗ್ಗೆ ವಿವರವಾದ ಮಾಹಿತಿಯನ್ನು ಶಾ ಅವರಿಗೆ ನೀಡಿದ್ದೇವೆ. ಕಾಂಗ್ರೆಸ್‌ ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ಸಚಿವರ ಗಮನಕ್ಕೆ ತಂದಿದ್ದೇವೆ‘ ಎಂದು ವಿಜಯೇಂದ್ರ ತಿಳಿಸಿದರು. 

ADVERTISEMENT

ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣ, ಕೊಪ್ಪಳದಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆ, ಮದ್ದೂರು ಘಟನೆ ಸೇರಿದಂತೆ ಹಲವು ಘಟನೆಗಳು ನಡೆದಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ದಿನೇ ದಿನೇ ಕುಸಿಯುತ್ತಿದೆ. ಈ ಬಗ್ಗೆ ಸವಿಸ್ತಾರವಾಗಿ ಚರ್ಚೆ ಮಾಡಿದ್ದೇವೆ ಎಂದು ಅವರು ತಿಳಿಸಿದರು. 

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಪಕ್ಷ ನಾಯಕರಾದ ಆರ್. ಅಶೋಕ, ಛಲವಾದಿ ನಾರಾಯಣಸ್ವಾಮಿ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಬ್ರಿಜೇಶ್‌ ಚೌಟ, ಶಾಸಕರಾದ ಎಸ್‌.ಆರ್.ವಿಶ್ವನಾಥ್‌, ಹರೀಶ್‌ ಪೂಂಜ, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್‌ ಕುಂಪಲ ನಿಯೋಗದಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.