ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತುಹಾಕಿದ್ದಾಗಿ ಹೇಳಿಕೆ ನೀಡಿದ್ದ ಹಾಗೂ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಗೆ ಕಾರಣನಾಗಿದ್ದ ಸಾಕ್ಷಿ ದೂರುದಾರನನ್ನು ಈ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಬಂಧಿಸಿದೆ.
‘ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದಿನಿಂದ ಹಲವಾರು ಅಪರಾಧ ಕೃತ್ಯಗಳು ನಡೆದಿವೆ. ನನಗೆ ಜೀವಬೆದರಿಕೆ ಒಡ್ಡಿ, ಈ ಅಪರಾಧ ಕೃತ್ಯಗಳ ಮೃತದೇಹಗಳನ್ನು ರಹಸ್ಯವಾಗಿ ವಿಲೇವಾರಿ ಮಾಡಿಸಿದ್ದಾರೆ’ ಎಂದು ಈತ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ಜುಲೈ 3ರಂದು ದೂರು ನೀಡಿದ್ದರು. ಈ ಬಗ್ಗೆ ಭಾರತೀಯ ನ್ಯಾಯ ಸಂಹಿತೆಯ ಕಲಂ 211 (ಎ) ಅಡಿಯಲ್ಲಿ ಧರ್ಮಸ್ಥಳ ಠಾಣೆಯಲ್ಲಿ ಜುಲೈ 4ರಂದು ಪ್ರಕರಣ ದಾಖಲಾಗಿತ್ತು.
ಜುಲೈ 11ರಂದು ವಕೀಲರ ಜತೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಈ ದೂರುದಾರ, ಹೇಳಿಕೆ ದಾಖಲಿಸಿದ್ದರು.
ತನಿಖೆ ನಡೆಸಬೇಕು ಎಂಬ ಒತ್ತಡ ಹೆಚ್ಚಿದ್ದರಿಂದ ರಾಜ್ಯ ಸರ್ಕಾರ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಪ್ರಣವ ಮೊಹಾಂತಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಿದ್ದು, ಎಸ್‌ಐಟಿ ತನಿಖೆ ನಡೆಸುತ್ತಿದೆ.
ತನಿಖೆ ಆರಂಭಿಸಿರುವ ಎಸ್‌ಐಟಿ, ಸಾಕ್ಷಿ ದೂರುದಾರ ತೋರಿಸಿದ ಜಾಗಗಳಲ್ಲಿ ಅಗೆದು ಅವಶೇಷ ಶೋಧ ಕಾರ್ಯ ನಡೆಸಿದೆ. ಎರಡು ಕಡೆ ಅವಶೇಷಗಳು ಸಿಕ್ಕಿದ್ದು, ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಈ ವರದಿ ಬರುವವರೆಗೆ ಮತ್ತೆ ಶೋಧ ಕಾರ್ಯ ನಡೆಸುವುದನ್ನು ಎಸ್‌ಐಟಿ ನಿಲ್ಲಿಸಿದೆ. ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ.
ಸಾಕ್ಷಿ ಸಂರಕ್ಷಣಾ ಕಾಯ್ದೆ ಅಡಿ ಈ ಸಾಕ್ಷಿ ದೂರುದಾರ ಸಂರಕ್ಷಣೆ ಪಡೆದಿದ್ದರು. ಎಸ್‌ಐಟಿ ತನಿಖೆ ನಡೆಯುವ ವೇಳೆ ವಕೀಲರೊಂದಿಗೆ ಬಂದು, ಇಡೀ ದಿನ ಎಸ್‌ಐಟಿ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ನಂತರ ವಕೀಲರೊಂದಿಗೆ ಅಜ್ಞಾತ ಸ್ಥಳಕ್ಕೆ ತೆರಳುತ್ತಿದ್ದರು.
ಸಾಕ್ಷಿ ದೂರುದಾರನನ್ನು ಬಂಧಿಸಿ, ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂಬ ಬೇಡಿಕೆ ಬಂದಿತ್ತು. ಏತನ್ಮಧ್ಯೆ ಸಾಕ್ಷಿ ದೂರುದಾರಗೆ ಸಾಕ್ಷಿ ಸಂರಕ್ಷಣಾ ಕಾಯ್ದೆಯಡಿ ನೀಡಿದ್ದ ರಕ್ಷಣೆಯನ್ನು ಸಕ್ಷಮ ಪ್ರಾಧಿಕಾರ ರದ್ದು ಪಡಿಸಿದೆ ಎನ್ನಲಾಗುತ್ತಿದ್ದು, ಹೀಗಾಗಿ ಎಸ್‌ಐಟಿ ಆತನನ್ನು ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.
ಉಡುಪಿಯಲ್ಲಿ ಪ್ರತಿಕ್ರಿಯಿಸಿದ ಗೃಹ ಸಚಿವ ಪರಮೇಶ್ವರ್, ‘ಸಾಕ್ಷಿ ದೂರುದಾರನ ಬಂಧನ ಆಗಿರುವುದು ನಿಜ. ಉಳಿದ ಮಾಹಿತಿಯನ್ನು ಎಸ್‌ಐಟಿ ನೀಡಲಿದೆ’ ಎಂದರು.
‘ಎಸ್‌ಐಟಿ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಸುಜಾತಾ ಭಟ್ ಪ್ರಕರಣ ಹಾಗೂ ಸಾಕ್ಷಿದೂರುದಾರನ ಹಿಂದೆ ಜಾಲ ಇದೆ ಎಂಬ ಆರೋಪದ ಬಗ್ಗೆ ನಾನೇನೂ ಹೇಳಲು ಹಾಗುವುದಿಲ್ಲ. ಎಲ್ಲವನ್ನೂ ಎಸ್‌ಐಟಿ ತನಿಖೆ ಮಾಡುತ್ತಿದೆ. ಎಸ್‌ಐಟಿಯ ಅಂತಿಮ ವರದಿ ಬರುವವರೆಗೆ ನಾನು ಹೇಳಿಕೆ ನೀಡಲ್ಲ’ ಎಂದು ಗೃಹ ಸಚಿವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.