ಬೆಂಗಳೂರು: ‘ಮಧುಮೇಹ ಎಂಬುದು ನಿರ್ವಹಣೆ ಮಾಡಬಹುದಾದಂಥದ್ದು. ಆದರೆ, ಇದನ್ನೇ ನೆಪ ಮಾಡಿಕೊಂಡು ಪತ್ನಿ ಮತ್ತು ಮಕ್ಕಳಿಗೆ ಪ್ರತಿ ತಿಂಗಳ 10 ಸಾವಿರ ಜೀವನಾಂಶ ನೀಡುವುದಕ್ಕೆ ವಿನಾಯ್ತಿ ನೀಡಬೇಕೆಂಬ ಕೋರಿಕೆಯನ್ನು ಮನ್ನಿಸಲಾಗುವುದಿಲ್ಲ‘ ಎಂದು ಹೈಕೋರ್ಟ್ ಆದೇಶಿಸಿದೆ.
ಈ ಸಂಬಂಧ ನಗರದ 38 ವರ್ಷದ ಪುರುಷರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಕೌಟುಂಬಿಕ ನ್ಯಾಯಾಲಯದ ಆದೇಶದಂತೆ ಪತ್ನಿ ಮತ್ತು ಮಕ್ಕಳಿಗೆ ಜೀವನಾಂಶ ನೀಡಲೇಬೇಕು‘ ಎಂದು ಅರ್ಜಿದಾರರಿಗೆ ಖಡಕ್ ಆದೇಶ ಮಾಡಿದೆ.
‘ಪತ್ನಿ ಉದ್ಯೋಗದಲ್ಲಿದ್ದು, ಆಕೆಗೆ ಜೀವನಾಂಶದ ಅಗತ್ಯವಿಲ್ಲ. ಅಕೆ ಅಪ್ರಾಪ್ತ ವಯಸ್ಸಿನ ಮಗುವಿನೊಂದಿಗೆ ಉತ್ತಮ ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ, ನನಗೆ ಕಾಲಕಾಲಕ್ಕೆ ಜೀವನಾಂಶ ಪಾವತಿಸಲು ಸಾಧ್ಯವಿಲ್ಲ‘ ಎಂಬ ಪತಿಯ ವಾದವನ್ನು ನ್ಯಾಯಪೀಠ ಸಾರಾಸಗಟಾಗಿ ತಿರಸ್ಕರಿಸಿದೆ.
‘ಜಗತ್ತಿನಾದ್ಯಂತ ಬಹುತೇಕ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಇವತ್ತು ವೈದ್ಯಕೀಯ ವಿಜ್ಞಾನ ಸಾಕಷ್ಟು ಮುಂದುವರಿದಿದೆ. ಇಂತಹುದೊಂದು ತೊಂದರೆಯನ್ನು ಸೂಕ್ತ ವೈದ್ಯಕೀಯ ಆರೈಕೆ ಮೂಲಕ ನಿರ್ವಹಿಸಬಹುದು. ಆದರೆ, ಇದೇ ಕಾರಣಕ್ಕಾಗಿ ಅರ್ಜಿದಾರರು ಜೀವನಾಂಶ ಪಾವತಿಯಿಂದ ತಪ್ಪಿಸಿಕೊಳ್ಳಲಾಗದು’ ಎಂದು ಅಭಿಪ್ರಾಯಪಟ್ಟಿದೆ.
‘ಅಪರಾಧ ದಂಡ ಸಂಹಿತೆ ಕಲಂ 125, ಮಹಿಳೆಯರ ವಿರುದ್ಧದ ಕೌಟುಂಬಿಕದ ದೌರ್ಜನ್ಯ ತಡೆ ಕಾಯ್ದೆ–2005 ಮತ್ತು ಹಿಂದೂ ವಿವಾಹ ಕಾಯ್ದೆ–1955ರ ಕಲಂ 24ರ ಪ್ರಕಾರ ಯಾವುದೇ ಧರ್ಮಕ್ಕೆ ಸೇರಿದ ವ್ಯಕ್ತಿ ದೈಹಿಕವಾಗಿ ದುಡಿಯುವ ಸಾಮರ್ಥ್ಯವಿದ್ದರೆ ಆತ ಪತ್ನಿ ಹಾಗೂ ಮಕ್ಕಳ ಜೀವನ ನಿರ್ವಹಣೆಗೆ ಜೀವನಾಂಶವನ್ನು ಪಾವತಿಸಲೇಬೇಕು‘ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.