ADVERTISEMENT

ಬಸ್ಸುಗಳಲ್ಲಿ ಅಂತರ ಕಷ್ಟ: ಲಕ್ಷ್ಮಣ ಸವದಿ

​ಪ್ರಜಾವಾಣಿ ವಾರ್ತೆ
Published 18 ಮೇ 2020, 4:46 IST
Last Updated 18 ಮೇ 2020, 4:46 IST
ಸವದಿ
ಸವದಿ   

ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸುಗಳ ಸಂಚಾರಕ್ಕೆ ಅವಕಾಶ ನೀಡಬೇಕು. ಆದರೆ, ಬಸ್ಸುಗಳೊಳಗೆ ಅಂತರ ಕಾಯ್ದುಕೊಂಡು ಪ್ರಯಾಣ ಮಾಡುವುದು ಕಾರ್ಯಸಾಧುವಲ್ಲ. ಆದ್ದರಿಂದ ಪೂರ್ಣ ಪ್ರಮಾಣದಲ್ಲಿ ಪ್ರಯಾಣಿಕರ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣಸವದಿ ಕೇಂದ್ರ ರಸ್ತೆ ಸಾರಿಗೆ ಸಚಿನ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ.

‘ಅಂತರ ಕಾಪಾಡಿಕೊಂಡು ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸಬೇಕಾದರೆ ಸೀಟುಗಳ ಸಂಖ್ಯೆ ಕಡಿಮೆ ಮಾಡಬೇಕು. ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇರುತ್ತಾರೆ. ನಮ್ಮ ಬಳಿ ಹೆಚ್ಚುವರಿ ಬಸ್ಸುಗಳೂ ಇಲ್ಲ’ ಎಂದು ಹೇಳಿದ್ದಾರೆ.

ಸಾರಿಗೆ ಸಂಸ್ಥೆಗಳ ಬಸ್ಸುಗಳ ಮೇಲೆ ನಿರ್ಬಂಧ ಹೇರುವುದರಿಂದ ಟ್ಯಾಕ್ಸಿ, ಕ್ಯಾಬ್‌, ಆಟೋ ಇತ್ಯಾದಿಗಳನ್ನು ಪ್ರಯಾಣಿಕರು ನೆಚ್ಚಿಕೊಳ್ಳುತ್ತಾರೆ. ರಸ್ತೆಗಳಲ್ಲಿ ವಾಹನ ಸಂದಣಿ ಹೆಚ್ಚಾಗುತ್ತದೆ ಎಂದು ಅವರು ತಿಳಿಸಿದರು.

ADVERTISEMENT

‘ಹವಾ ನಿಯಂತ್ರಿತ ಬಸ್ಸುಗಳಿಗೆ ಅವಕಾಶ ನೀಡುವುದು ಬೇಡ. ವಾಹನಗಳಲ್ಲಿ ಚಾಲಕ ಮತ್ತು ನಿರ್ವಾಹಕರು ಮುಖಗವಸು‌ ಹಾಕಿಕೊಂಡೇ ಬಸ್‌ ಚಲಾಯಿಸುತ್ತಾರೆ. ಪ್ರಯಾಣಿಕರೂ ಮಾಸ್ಕ್ ಹಾಕಿಕೊಂಡು ಸ್ಯಾನಿಟೈಸರ್‌ ಬಳಸಬೇಕು. ಕೋವಿಡ್ ಸೋಂಕು ಇದ್ದವರಿಗೆ ಬಸ್ಸು ಹತ್ತಲು ಅವಕಾಶ ನೀಡುವುದಿಲ್ಲ’ ಎಂದು ಸವದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.