ADVERTISEMENT

ಕುಗ್ರಾಮಗಳಿಗೂ ಡಿಜಿಟಲ್‌ ಸಂಪರ್ಕ ಜಾಲ: ಡಿಸಿಎಂ ಅಶ್ವತ್ಥನಾರಾಯಣ

2025 ರ ವೇಳೆ 10 ಲಕ್ಷ ಉದ್ಯೋಗ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 19:41 IST
Last Updated 9 ಫೆಬ್ರುವರಿ 2021, 19:41 IST
ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ‘ಕರ್ನಾಟಕ ಡಿಜಿಟಿಲ್ ಆರ್ಥಿಕತೆ ಮಿಷನ್’ನ (ಕೆಡಿಇಎಂ) ಉದ್ಘಾಟಿಸಿದರು.
ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ‘ಕರ್ನಾಟಕ ಡಿಜಿಟಿಲ್ ಆರ್ಥಿಕತೆ ಮಿಷನ್’ನ (ಕೆಡಿಇಎಂ) ಉದ್ಘಾಟಿಸಿದರು.   

ಬೆಂಗಳೂರು: ಡಿಜಿಟಲ್‌ ಆರ್ಥಿಕತೆ ಸದೃಢಗೊಳಿಸಲು ರಾಜ್ಯದ ಕುಗ್ರಾಮಗಳಲ್ಲೂ ಸಂಪರ್ಕ ಜಾಲ ಉತ್ತಮಗೊಳಿಸಲಾಗುವುದು. ಇದಕ್ಕಾಗಿ ದಿನದ 24 ಗಂಟೆ ವಿದ್ಯುತ್‌ ಪೂರೈಕೆ ಮತ್ತು ಮೂಲಸೌಕರ್ಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಉಪಮುಖ್ಯ
ಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

ಕರ್ನಾಟಕದ ಒಟ್ಟು ಉತ್ಪಾದನೆಯಲ್ಲಿ (ಎಸ್‌ಡಿಜಿಪಿ) ಡಿಜಿಟಲ್‌ ಆರ್ಥಿ
ಕತೆಯ ಕೊಡುಗೆಯನ್ನು ಮುಂದಿನ 5 ವರ್ಷಗಳಲ್ಲಿ ಶೇ 30 ಕ್ಕೆ ಹೆಚ್ಚಿಸುವ ಗುರಿ ಹೊಂದಿರುವ ‘ಕರ್ನಾಟಕ ಡಿಜಿಟಿಲ್ ಆರ್ಥಿಕತೆ ಮಿಷನ್’ನ (ಕೆಡಿಇಎಂ) ಉದ್ಘಾಟನೆ ಮತ್ತು ‘ಬಿಯಾಂಡ್ ಬೆಂಗಳೂರು’ ವರದಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಡಿಜಿಟಲ್ ಆರ್ಥಿಕತೆಗೆ ಪೂರಕವಾಗಿ ಮಾಹಿತಿ ತಂತ್ರಜ್ಞಾನ ಆಧಾರಿತ ಉದ್ದಿಮೆ
ಗಳಿಗೆ ಹೂಡಿಕೆಗಳನ್ನು ಆಕರ್ಷಿಸಿ 2025ರ ವೇಳೆಗೆ 10 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯನ್ನು ಕೆಡಿಇಎಂ ಹೊಂದಿದೆ ಎಂದರು.

ADVERTISEMENT

ಕೆಡಿಇಎಂ ಹೆಚ್ಚು ಉದ್ಯಮಸ್ನೇಹಿ ಆಗಿರಬೇಕು ಎಂಬ ಕಾರಣ ಸರ್ಕಾರ ಇದರಲ್ಲಿ ಹೆಚ್ಚಿನ ಪಾಲುದಾರಿಕೆಯನ್ನು (ಶೇ 51) ಉದ್ಯಮ ಸಂಘಟನೆಗಳಿಗೆ ಬಿಟ್ಟುಕೊಟ್ಟಿದೆ. ಇದರಲ್ಲಿ ಸರ್ಕಾರ ಶೇ 49 ಪಾಲು ಇರಿಸಿಕೊಂಡಿದೆ ಮತ್ತು ಸೌಕರ್ಯ ಒದಗಿಸುವ ಪಾತ್ರವನ್ನು ನಿರ್ವಹಿಸಲು ಒತ್ತು ನೀಡಲಿದೆ ಎಂದರು.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ಮಾತನಾಡಿ, ಸದ್ಯ ರಾಜ್ಯದ ಒಟ್ಟಾರೆ ಜಿಡಿಪಿಗೆ ಮಾಹಿತಿ ತಂತ್ರಜ್ಞಾನ ವಲಯದ ಕೊಡುಗೆ ಶೇ 25ರಷ್ಟು ಇದ್ದು, ಇದರಲ್ಲಿ ಬೆಂಗಳೂರಿನ ಕೊಡುಗೆಯೇ ಶೇ 98 ರಷ್ಟಿದೆ.ಬೆಂಗಳೂರು ವ್ಯಾಪ್ತಿಯಾಚೆಗಿನ ಪಾಲು ಹೆಚ್ಚಿಸುವ ಸಲುವಾಗಿ ‘ಬಿಯಾಂಡ್ ಬೆಂಗಳೂರು’ ಯೋಜನೆ ಜಾರಿಗೊಳಿಸಲಾಗಿದೆ ಎಂದು ವಿವರಿಸಿದರು.

ಕೆಡಿಇಎಂ ಅಧ್ಯಕ್ಷ ಬಿ.ವಿ.ನಾಯ್ಡು ಮಾತನಾಡಿ, ಮೈಸೂರು, ಮಂಗಳೂರು, ಹುಬ್ಬಳ್ಳಿ– ಧಾರವಾಡ, ಕಲಬುರ್ಗಿ, ಶಿವಮೊಗ್ಗ, ತುಮಕೂರು ಈ ಕ್ಲಸ್ಟರ್ ಗಳಲ್ಲಿ ಡಿಟಿಜಲ್ ಆರ್ಥಿಕತೆ ಕೊಡುಗೆ ಹೆಚ್ಚಿಸಲು ಅವಕಾಶಗಳಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.