ADVERTISEMENT

ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಡಿಜಿಟಲ್‌ ಹೆಲ್ತ್‌ ಕಾರ್ಡ್‌: ದೊರೆಸ್ವಾಮಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 18:44 IST
Last Updated 5 ಫೆಬ್ರುವರಿ 2021, 18:44 IST

ಬೆಂಗಳೂರು: ‘ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಡಿಜಿಟಲ್‌ ಹೆಲ್ತ್‌ ಕಾರ್ಡ್‌ ನೀಡುವ ಯೋಜನೆಯನ್ನು ಮುಂದಿನ (2021–22) ಬಜೆಟ್‌ನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಅವರಿಗೆ ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ.ಎಂ.ಆರ್. ದೊರೆಸ್ವಾಮಿ ಶಿಫಾರಸು ಮಾಡಿದ್ದಾರೆ.

ಅಲ್ಲದೆ, ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ ಆಫ್‌ ಎಮಿನೆನ್ಸ್‌ (ಎಕ್ಸೆಲೆನ್ಸ್) ಪದವಿ ಸೃಜಿಸಿ ಅಂತರರಾಷ್ಟ್ರೀಯ ಮತ್ತು ಅನಿವಾಸಿ ಭಾರತೀಯರನ್ನು ಆಹ್ವಾನಿಸಿ ಶಿಕ್ಷಣ ಮತ್ತು ವೈದ್ಯಕೀಯ ಸೇವೆಗಳ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳುವ ಕಾರ್ಯಕ್ರಮವನ್ನೂ ಬಜೆಟ್‌ನಲ್ಲಿ ಅಳವಡಿಸಿಕೊಳ್ಳಬೇಕು ಎಂದೂ ಶಿಫಾರಸು ಮಾಡಿದ್ದಾರೆ.

2021–22 ಸಾಲಿನ ಬಜೆಟ್‌ನಲ್ಲಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಅಳವಡಿಸಿಕೊಳ್ಳಬೇಕಾದ ಯೋಜನೆಗಳ ಪೂರ್ವಸಿದ್ಧತಾ ಸಭೆಯ ಬಳಿಕ ಸಚಿವರಿಗೆ ಈ ಶಿಫಾರಸುಗಳ ಮನವಿಯನ್ನು ದೊರೆಸ್ವಾಮಿ ಸಲ್ಲಿಸಿದ್ದಾರೆ.

ADVERTISEMENT

‘ರಾಜ್ಯದಲ್ಲಿ ಎಲ್ಲ 48 ಸಾವಿರ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಆರೋಗ್ಯ ವ್ಯಕ್ತಿಚಿತ್ರವನ್ನು (ಪ್ರೊಫೈಲ್‌) ಸಿದ್ಧಪಡಿಸಿದ ಡಿಜಿಟಲ್‌ ಹೆಲ್ತ್‌ ಕಾರ್ಡ್‌ ನೀಡುವುದರಿಂದ ಸೂಕ್ತ ವೈದ್ಯಕೀಯ ಶುಶ್ರೂಷೆ ನೀಡಲು ಸಾಧ್ಯವಾಗಲಿದೆ. ಪ್ರೊಫೆಸರ್‌ ಆಫ್‌ ಎಮಿನೆನ್ಸ್‌ (ಎಕ್ಸ್‌ಲೆನ್ಸ್) ಪದವಿ ಪಾಶ್ಚಾತ್ಯ ದೇಶಗಳಲ್ಲಿ ಪ್ರಸಿದ್ಧಿ ಪಡೆದಿದೆ. ಈ ಯೋಜನೆಯಡಿ ಅತ್ಯಂತ ಅವಶ್ಯಕತೆ ಇರುವ ವೈದ್ಯಕೀಯ ಮತ್ತು ಶೈಕ್ಷಣಿಕ ಕ್ಷೇತ್ರದ ಪರಿಣತರನ್ನು ಆಹ್ವಾನಿಸಿ ರಾಜ್ಯದ ವೈದ್ಯರು ಮತ್ತು ಪ್ರಾಧ್ಯಾಪಕರಿಗೆ ತರಬೇತಿ ಕೊಡುವ ಕಲ್ಪನೆ ಇದಾಗಿದೆ’ ಎಂದೂ ಶಿಫಾರಸಿನಲ್ಲಿ ಅವರು ವಿವರಿಸಿದ್ದಾರೆ.

ಈ ಎರಡೂ ಸಲಹೆಗಳಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದೂ ದೊರೆಸ್ವಾಮಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.