
ಬೆಂಗಳೂರು: ಮೈಸೂರಿನ ವಾಕ್–ಶ್ರವಣ ಸಂಸ್ಥೆಯ ಘಟಕವನ್ನು ಉತ್ತರ ಕರ್ನಾಟಕದಲ್ಲಿ ಸ್ಥಾಪಿಸಲು ಅನುಮೋದನೆ ನೀಡಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರಿಗೆ ಮನವಿ ಮಾಡಿದರು.
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (ಎಐಐಎಸ್‌ಎಚ್) ಸಭೆಯು ಜೆ.ಪಿ.ನಡ್ಡಾ ಅವರ ನೇತೃತ್ವದಲ್ಲಿ ಮಂಗಳವಾರ ನಡೆಯಿತು.
ದಿನೇಶ್ ಗುಂಡೂರಾವ್ ಅವರು ವರ್ಚ್ಯುವಲ್ ಆಗಿ ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ, ಉತ್ತರ ಕರ್ನಾಟಕಕ್ಕೆ ವಾಕ್–ಶ್ರವಣ ಸಂಸ್ಥೆಯ ಅಗತ್ಯವಿದೆ ಎಂದು ವಿಷಯ ಪ್ರಸ್ತಾಪಿಸಿದರು. ‘ಘಟಕ ಸ್ಥಾಪನೆಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದರೆ, ರಾಜ್ಯ ಸರ್ಕಾರವು ಅಗತ್ಯ ಭೂಮಿ ಮತ್ತು ಮೂಲಸೌಕರ್ಯಗಳನ್ನು ಒದಗಿಸಲಿದೆ. ಕೇಂದ್ರವು ತಾಂತ್ರಿಕ ಘಟಕಗಳು ಮತ್ತು ನುರಿತ ತಜ್ಞರ ವಿಚಾರದಲ್ಲಿ ನೆರವು ಒದಗಿಸಬೇಕು. ಈ ಘಟಕವನ್ನು ತರಬೇತಿ, ಸೇವೆ ಮತ್ತು ಸಂಶೋಧನೆಗೆ ಬಳಸಿಕೊಳ್ಳಬಹುದು’ ಎಂದು ಪ್ರಸ್ತಾಪಿಸಿದರು.
ಜತೆಗೆ, ‘ಆರೋಗ್ಯ ಸಿಬ್ಬಂದಿಗೆ ಈ ವಿಚಾರದಲ್ಲಿ ತರಬೇತಿ ನೀಡುವ ಉದ್ದೇಶದಿಂದ 3–6 ತಿಂಗಳ ಅಲ್ಪಾವಧಿಯ ಕೋರ್ಸ್ ಆರಂಭಿಸಬಹುದಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಮೈಸೂರಿನ ವಾಕ್–ಶ್ರವಣ ಸಂಸ್ಥೆಯ ಸಹಯೋಗದಲ್ಲಿ ನಡೆಸಬಹುದಾಗಿದೆ. ಜಿಲ್ಲೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ವಾಕ್–ಶ್ರವಣ ಸಂಸ್ಥೆಯ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಬಹುದು. ಈ ಪ್ರಸ್ತಾಪಗಳಿಗೆ ಕೇಂದ್ರವು ಅನುಮೋದನೆ ನೀಡಬೇಕು’ ಎಂದು ಕೋರಿದರು.
ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ, ‘ರಾಜ್ಯ ಸರ್ಕಾರಿ ಈ ಸಂಬಂಧ ಪ್ರಸ್ತಾಪವನ್ನು ಕಳುಹಿಸಲಿ. ಅದನ್ನು ಪರಿಶೀಲಿಸಿ, ಕ್ರಮ ತಗೆದುಕೊಳ್ಳುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.