ಬೆಂಗಳೂರು: ‘ಕೂಲಿ ಕಾರ್ಮಿಕರು, ಸಾಮಾನ್ಯ ಉದ್ಯೋಗಿಗಳ ಹಿತದೃಷ್ಟಿಯಿಂದ ರಾತ್ರಿ 8 ಗಂಟೆಯವರೆಗೆ ‘ನಮ್ಮ ಕ್ಲಿನಿಕ್’ ತೆರೆಯಲು ನಿರ್ಧರಿಸಲಾಗಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ನಗರದಲ್ಲಿ ಶನಿವಾರ ಮಾತನಾಡಿದ ಅವರು, ‘ಬೆಂಗಳೂರು ಹೊರತುಪಡಿಸಿ ರಾಜ್ಯದ 30 ಕ್ಲಿನಿಕ್‌ಗಳು ಸಂಜೆ ನಂತರ ಕಾರ್ಯನಿರ್ವಹಿಸುವ ಕುರಿತು ಮಾತುಕತೆ ನಡೆಸಲಾಗಿದೆ. ಮಧ್ಯಾಹ್ನ 12ರಿಂದ ರಾತ್ರಿ 8ರವರೆಗೆ ಸಮಯ ನಿಗದಿ ಮಾಡಲಾಗಿದೆ. ಈ ಸಮಯದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಇರಬೇಕಿದೆ. ಬೆಂಗಳೂರಿನ ಕೇಂದ್ರಗಳಲ್ಲೂ ಸಂಜೆ ಸೇವೆ ಆರಂಭಿಸುವ ಕುರಿತು ಶೀಘ್ರ ಸಭೆ ನಡೆಸಲಾಗುವುದು’ ಎಂದರು.
‘108 ಆಂಬ್ಯುಲೆನ್ಸ್ ಸೇವೆಗೆ ಮರು ಟೆಂಡರ್ ಕರೆಯುವ ಕುರಿತು ನಿಯಮಗಳನ್ನು ರೂಪಿಸಲು ತಾಂತ್ರಿಕ ಸಮಿತಿ ರಚಿಸಲಾಗಿದೆ. ವರದಿ ನೀಡಿದ ತಕ್ಷಣ ಹೊಸದಾಗಿ ಟೆಂಡರ್ ಕರೆಯಲಾಗುವುದು’ ಎಂದು ಹೇಳಿದರು.
‘ಸರ್ಕಾರಿ, ಅನುದಾನಿತ ಕಾಲೇಜು ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್ (ಮೆನ್‌ಸ್ಟ್ರುವಲ್ ಕಪ್) ವಿತರಣೆ ಕಾರ್ಯಕ್ಕೆ ಇದೇ ತಿಂಗಳು ಚಾಲನೆ ನೀಡಲಾಗುವುದು. ದಕ್ಷಿಣ ಕನ್ನಡದಲ್ಲಿ 12 ಸಾವಿರ, ಚಾಮರಾಜನಗರದಲ್ಲಿ 3 ಸಾವಿರ ವಿತರಿಸಲಾಗುವುದು. ಹಂತಹಂತವಾಗಿ ರಾಜ್ಯದಾದ್ಯಂತ ವಿತರಣೆಗೆ ಕ್ರಮಕೈಗೊಳ್ಳಲಾಗುವುದು. ಮರು ಬಳಕೆಯ ಈ ಕಪ್‌ಗಳನ್ನು 10 ವರ್ಷ ಉಪಯೋಗಿಸಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.