ADVERTISEMENT

ವಾಣಿಜ್ಯ ವಾಹನಗಳ ಚಾಲಕರಿಗೆ ಪರಿಹಾರ: ಷರತ್ತು ಸಡಿಲಿಸಲು ಸಚಿವರ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 22:13 IST
Last Updated 9 ಜುಲೈ 2021, 22:13 IST
ಶಿವರಾಮ ಹೆಬ್ಬಾರ್‌
ಶಿವರಾಮ ಹೆಬ್ಬಾರ್‌   

ಬೆಂಗಳೂರು: ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕ ಅಪಘಾತ ಪರಿಹಾರ ಯೋಜನೆ ಅಡಿಯಲ್ಲಿ ಚಾಲಕರು ಪರಿಹಾರ ಪಡೆಯಲು ವಿಧಿಸಿರುವ ಷರತ್ತುಗಳನ್ನು ಸಡಿಲಿಕೆ ಮಾಡುವಂತೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿ ರಾಜ್ಯ ಅಸಂಘಟಿತ ಕಾರ್ಮಿಕರ ಭದ್ರತಾ ಮಂಡಳಿಯ ಸಭೆ ನಡೆಸಿದ ಅವರು, ‘ಚಾಲಕರು ಪರಿಹಾರ ಪಡೆಯಲು ಇರುವ ತೊಡಕುಗಳನ್ನು ನಿವಾರಿಸಬೇಕು. ಷರತ್ತುಗಳನ್ನು ಸಡಿಲಿಕೆ ಮಾಡಿ, ಈ ಕುರಿತು ವ್ಯಾಪಕ ಪ್ರಚಾರ ನಡೆಸಬೇಕು’ ಎಂದು ನಿರ್ದೇಶನ ನೀಡಿದರು.

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಅಸಂಘಟಿತ ಕಾರ್ಮಿಕರಿಗೆ ಇಲಾಖೆಯಿಂದ ನೀಡುವ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಲು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್‌ ವಿತರಿಸಲು ಪೂರ್ವಸಿದ್ಧತೆ ನಡೆಸಬೇಕು ಎಂದು ಸೂಚಿಸಿದರು.

ADVERTISEMENT

ಅಸಂಘಟಿತ ಕಾರ್ಮಿಕರ ಅನುಕೂಲಕ್ಕಾಗಿ ಪ್ರತ್ಯೇಕ ಮಂಡಳಿ ಹಾಗೂ ಹೊಸ ಯೋಜನೆಗಳನ್ನು ರೂಪಿಸುವ ಕುರಿತು ಸಚಿವರು ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು.

ಪ್ರಶಸ್ತಿ ಮೊತ್ತ ಹೆಚ್ಚಳ: ಅಸಂಘಟಿತ ಕಾರ್ಮಿಕರಿಗೆ ಇಲಾಖೆಯಿಂದ ನೀಡುವ ಪ್ರಶಸ್ತಿಯ ಮೊತ್ತವನ್ನು ಪ್ರಥಮ ಸ್ಥಾನಕ್ಕೆ ₹ 15,000ದಿಂದ ₹ 20,000ಕ್ಕೆ, ದ್ವಿತೀಯ ಸ್ಥಾನಕ್ಕೆ ₹ 15,000ಕ್ಕೆ, ತೃತೀಯ ಸ್ಥಾನಕ್ಕೆ ₹ 10,000ಕ್ಕೆ ಹಾಗೂ ಸಮಾಧಾನಕರ ಬಹುಮಾನದ ಮೊತ್ತವನ್ನು ₹ 1,000ದ ಬದಲಿಗೆ ₹ 5,000ಕ್ಕೆ ಹೆಚ್ಚಿಸುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಜಿ. ಕಲ್ಪನಾ, ಕಾರ್ಮಿಕ ಆಯುಕ್ತ ಅಕ್ರಂ ಪಾಷಾ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.