ಬೆಂಗಳೂರು: ‘ರಾಜ್ಯದ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಪ್ರಾಧ್ಯಾಪಕರ ವರ್ಗಾವಣೆ ಪಕ್ರಿಯೆ ಆರಂಭವಾಗಿದ್ದು, ಕೆಲವರು ವರ್ಗಾವಣೆ ತಪ್ಪಿಸಿಕೊಳ್ಳಲು ತಾವು ಅಂಗವಿಕಲರು ಎಂದು ನಕಲಿ ಪ್ರಮಾಣಪತ್ರ ಸಲ್ಲಿಸುತ್ತಿದ್ದಾರೆ’ ಎಂದು ಕೆಲ ಪ್ರಾಧ್ಯಾಪಕರು ಆರೋಪಿಸಿದ್ದಾರೆ.
ಈ ಸಂಬಂಧ ಕೆಲ ಅಂಗವಿಕಲ ಪ್ರಾಧ್ಯಾಪಕರು ಕಾಲೇಜು ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದು, ‘ಪ್ರಜಾವಾಣಿ’ಗೂ ಪತ್ರದ ಪ್ರತಿ ಕಳುಹಿಸಿದ್ದಾರೆ.
‘ವರ್ಗಾವಣೆಯಿಂದ ತಪ್ಪಿಸಿಕೊಳ್ಳಲೆಂದೇ ಅಂಗವಿಕಲತೆ ಕುರಿತ ಸುಳ್ಳು ಪ್ರಮಾಣ ಪತ್ರ ಸಲ್ಲಿಸುತ್ತಿದ್ದಾರೆ. ವರ್ಗಾವಣೆ ಪ್ರಕ್ರಿಯೆಗೆ ಅಧಿಸೂಚನೆ ಬಂದ ನಂತರ ಇಂತಹ ಕಾರ್ಯಕ್ಕೆ ಇಳಿದಿದ್ದಾರೆ’ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
‘ತಮ್ಮ ಅವಲಂಬಿತರೂ ಅಂಗವಿಕಲರು ಎಂದು ವರ್ಗಾವಣೆಯಿಂದ ವಿನಾಯಿತಿ ಪಡೆಯಲು ಅವಕಾಶವಿದೆ. ಇದನ್ನೂ ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ನಿಜವಾಗಿಯೂ ಅಂಗವಿಕಲರಾಗಿರುವ ಪ್ರಾಧ್ಯಾಪಕರಿಗೆ ಇದರಿಂದ ಅನ್ಯಾಯವಾಗುತ್ತಿದೆ’ ಎಂದಿದ್ದಾರೆ.
‘ವೃತ್ತಿಗೆ ಸೇರಿದ ತಕ್ಷಣವೇ ಪ್ರಾಧ್ಯಾಪಕರು ಕಾಲೇಜು ಶಿಕ್ಷಣ ಇಲಾಖೆಯ ಎಂಪ್ಲಾಯೀಸ್ ಮ್ಯಾನೆಜ್‌ಮೆಂಟ್ ಇನ್‌ಫರ್ಮೇಷನ್ ಸಿಸ್ಟಂನಲ್ಲಿ (EMIS) ತಮ್ಮ ಮತ್ತು ಅವಲಂಬಿತರ ಅಂಗವೈಕಲ್ಯದ ಪ್ರಮಾಣಪತ್ರ ಅಪ್‌ಲೋಡ್ ಮಾಡಬೇಕು. ಆದರೆ, ವೃತ್ತಿ ಆರಂಭಿಸಿ ಹತ್ತಾರು ವರ್ಷ ಕಳೆದವರು, ಈಗ ಅಂಗವಿಕಲರು ಮತ್ತು ಅವಲಂಬಿತರು ಅಂಗವಿಕಲರು ಎಂದು ಪ್ರಮಾಣಪತ್ರ ಅಪ್‌ಲೋಡ್ ಮಾಡುತ್ತಿದ್ದಾರೆ. ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ, ಅಂತಹವರಿಗೆ ವರ್ಗಾವಣೆಯಿಂದ ವಿನಾಯತಿ ನೀಡಬಾರದು’ ಎಂದು ಕೋರಿದ್ದಾರೆ.
‘ವಂಚನೆ ತಪ್ಪಿಸಲು ಇಲಾಖೆಯ ಆಯುಕ್ತರ ಎದುರಿನಲ್ಲಿಯೇ ತಜ್ಞ ವೈದ್ಯರಿಂದ ತಪಾಸಣೆ ನಡೆಸಬೇಕು. ನೈಜತೆಯಿದ್ದಲ್ಲಿ ಪ್ರಮಾಣಪತ್ರ ಮಾನ್ಯ ಮಾಡಬೇಕು’ ಎಂದು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.