
ಬೆಂಗಳೂರು: ‘ಅಂಗವಿಕಲರ ಹಕ್ಕುಗಳ ಕಾಯ್ದೆ–2016ರ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತಂತೆ ಆರು ವಾರಗಳಲ್ಲಿ ಸಮಗ್ರ ವರದಿ ಸಲ್ಲಿಸಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
‘ಕಾಯ್ದೆಯ ನಿಬಂಧನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಬೆಂಗಳೂರಿನ ವೈ.ಕಾರ್ತಿಕ್, ವೈ.ಕೌಶಿಕ್ ಹಾಗೂ ಬಳ್ಳಾರಿಯ ವೈ.ಸತೀಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ಹೈಕೋರ್ಟ್ ವಕೀಲ ಪ್ರದೀಪ್ ನಾಯಕ್ ವಾದ ಆಲಿಸಿದ ನ್ಯಾಯಪೀಠ, ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಮತ್ತು ಅಂಗವಿಕಲರ ಸಬಲೀಕರಣ ಇಲಾಖೆ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು.
‘ಕಾಯ್ದೆಯ ಕಲಂ 17, 24, 34, 35, 37 ಮತ್ತು 88ರ ಜಾರಿಗೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತಾದ ಸಮಗ್ರ ವರದಿಯನ್ನು ಆರು ವಾರಗಳಲ್ಲಿ ಸಲ್ಲಿಸಬೇಕು‘ ಎಂದು ಸರ್ಕಾರಕ್ಕೆ ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು 2026ರ ಫೆಬ್ರುವರಿ 4ಕ್ಕೆ ಮುಂದೂಡಿತು.
ಆಕ್ಷೇಪ ಏನು?: ‘ಅಂಗವಿಕಲರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ 5ರಷ್ಟು ಮೀಸಲಾತಿ ಕಲ್ಪಿಸುತ್ತಿಲ್ಲ. ಖಾಸಗಿ ಕ್ಷೇತ್ರದಲ್ಲಿ ಅಂಗವಿಕಲರನ್ನು ನೇಮಕ ಮಾಡಿಕೊಳ್ಳುವ ಉದ್ಯೋಗದಾತರಿಗೆ ಪ್ರೋತ್ಸಾಹ ಧನ ನೀಡುತ್ತಿಲ್ಲ. ಕೃಷಿ ಭೂಮಿ, ಮನೆ ಹಂಚಿಕೆ ಮಾಡುತ್ತಿಲ್ಲ. ಅಂಗವಿಕಲರ ಕಲ್ಯಾಣಕ್ಕೆ ನಿಗದಿಪಡಿಸಬೇಕಾದ ನಿಧಿಯನ್ನು ಹಂಚಿಕೆ ಮಾಡಿಲ್ಲ. ಕೇಂದ್ರ ಸರ್ಕಾರಕ್ಕೆ ಹಣ ಹಂಚಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಿಲ್ಲ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
‘ಅಂಗವಿಕಲರಿಗೆ ಹೆಚ್ಚುವರಿಯಾಗಿ ಶಾಲೆ ಮತ್ತು ಸಂಸ್ಥೆಗಳನ್ನು ತೆರೆಯಬೇಕು. ಎಲ್ಲಾ ಶಾಲೆಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಬೇಕು. ವಿಶೇಷ ತರಬೇತಿ ಕೇಂದ್ರ ಆರಂಭಿಸಬೇಕು. ಸರ್ಕಾರಿ ಉದ್ಯೋಗದಲ್ಲಿ ಶೇ 4ರ ಮೀಸಲಾತಿ ನೀಡಬೇಕು. ಸರ್ಕಾರದ ಪ್ರತಿ ಇಲಾಖೆಯಲ್ಲೂ ಅಂಗವಿಕಲರ ಕಲ್ಯಾಣಕ್ಕೆ ಶೇ 5ರಷ್ಟು ಬಜೆಟ್ ಮೀಸಲಿಡಬೇಕು. ವಿಶೇಷ ಅಂಗವಿಕಲತೆ ಗುರುತಿನ ಚೀಟಿ (ಯುಡಿಡಿ) ನೀಡಬೇಕು. ಅನರ್ಹರಿಗೆ ನೀಡಿರುವ ಯುಡಿಡಿ ರದ್ದುಪಡಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.