ಎಚ್.ಕೆ.ಪಾಟೀಲ
ಬೆಂಗಳೂರು: ರಾಜ್ಯದ ವಿಪತ್ತು ಉಪಶಮನ ನಿಧಿಯಡಿ ₹1,005 ಕೋಟಿ ವೆಚ್ಚದಲ್ಲಿ ವಿವಿಧ ಜಿಲ್ಲೆಗಳಲ್ಲಿ ಉಪಶಮನ ಕಾಮಗಾರಿಗಳನ್ನು ಕೈಗೊಳ್ಳಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.
ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ, ಉತ್ತರ ಕನ್ನಡ ಮತ್ತು ಹಾಸನ ಜಿಲ್ಲೆಗಳಲ್ಲಿನ ಪುನರಾವರ್ತಿತ ಭೂಕುಸಿತವನ್ನು ತಡೆಗಟ್ಟಲು ₹466.93 ಕೋಟಿ ವೆಚ್ಚದಲ್ಲಿ 720 ಕಾಮಗಾರಿ ಕೈಗೊಳ್ಳಲು ಒಪ್ಪಿಗೆ ನೀಡಲಾಗಿದೆ ಎಂದರು.
ರೈತರು ತಮ್ಮ ಜಮೀನಿನಲ್ಲಿ ಬಿದ್ದ ಮಳೆಯ ನೀರನ್ನು ಹೊಂಡಗಳಲ್ಲಿ ಸಂಗ್ರಹಿಸಿ ಆಪತ್ಕಾಲದಲ್ಲಿ ಬೆಳೆಗಳಿಗೆ ಬಳಸಲು ‘ಕೃಷಿ ಭಾಗ್ಯ’ ಯೋಜನೆಯಡಿ ಹಣಕಾಸು ನೆರವು ಒದಗಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ₹200 ಕೋಟಿ ಅನುದಾನವನ್ನು ಕೃಷಿ ಇಲಾಖೆಗೆ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
ಸಣ್ಣ ನೀರಾವರಿ ಇಲಾಖೆ ವಿಶ್ವ ಬ್ಯಾಂಕ್‌ನಿಂದ ₹550 ಕೋಟಿ ಆರ್ಥಿಕ ನೆರವು ಪಡೆದುಕೊಂಡಿದೆ. ಇದರಲ್ಲಿ ₹300 ಕೋಟಿಯನ್ನು ಬೆಂಗಳೂರು ನಗರದ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ ನೀರನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಪೂರೈಕೆ ಮಾಡಲು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ಲಿಫ್ಟ್–4 ವೃಷಭಾವತಿ ವ್ಯಾಲಿ ಯೋಜನೆ– ಹಂತ 2 ರ ಮೂಲಕ ನೀರನ್ನು ತುಂಬಿಸುವ ಯೋಜನೆಗೆ ಬಳಸಲು ಒಪ್ಪಿಗೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಪ್ರಮುಖ ತೀರ್ಮಾನಗಳು:
*ಕೊಡಗು ಜಿಲ್ಲೆ ವಿರಾಜಪೇಟೆಯ ಸರ್ಕಾರಿ ಆಸ್ಪತ್ರೆಯನ್ನು 250 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ₹95.60 ಕೋಟಿ
* ಚಿಕ್ಕೋಡಿಗೆ ಮಂಜೂರಾಗಿರುವ 50 ಹಾಸಿಗೆಗಳ ಐಸಿಯುವನ್ನು ಬೈಲಹೊಂಗಲ ತಾಲ್ಲೂಕು ಆಸ್ಪತ್ರೆಗೆ ಸ್ಥಳಾಂತರಿಸಲು ಒಪ್ಪಿಗೆ. ಇದರ ವೆಚ್ಚ ₹23.75 ಕೋಟಿ
*15 ನೇ ಹಣಕಾಸು ಆಯೋಗದ ಯೋಜನೆಯಡಿ ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆ ವಿಸ್ತರಣೆ ಮತ್ತು ಆಧುನೀಕರಣಕ್ಕೆ ₹329 ಕೋಟಿ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ
*ನವದೆಹಲಿ ಚಾಣಕ್ಯಪುರಿ ಸರ್ದಾರ್ ಪಟೇಲ್ ಮಾರ್ಗದಲ್ಲಿರುವ ಕರ್ನಾಟಕ ಭವನ–2(ಶರಾವತಿ) ಕಟ್ಟಡದ ನವೀಕರಣಕ್ಕೆ ₹16.30 ಕೋಟಿ
* ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ 2019 ರ ಮಾರ್ಚ್ 31 ಕ್ಕೆ ಮೊದಲು ನೋಂದಣಿಯಾದ ವಾಹನಗಳ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಯೋಜನೆಗೆ ₹40 ಕೋಟಿ
* ಕೆಎಸ್‌ಆರ್‌ಪಿ ಅಧೀನದಲ್ಲಿ ಹೊಸದಾಗಿ ಸ್ಥಾಪಿಸಿರುವ ಎರಡು ಐಆರ್‌ಬಿ ಪಡೆಗಳಿಗೆ ಅವಶ್ಯವಿರುವ ವಸತಿ ಮತ್ತು ವಸತಿಯೇತರ ಸೌಕರ್ಯಗಳನ್ನು ಕಲ್ಪಿಸಲು ₹60 ಕೋಟಿ
*ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗೆ ವೈದ್ಯಕೀಯ ಕಾಲೇಜು ಕಟ್ಟಡ, ಬಾಲಕ ಮತ್ತು ಬಾಲಕಿಯರ ಹಾಸ್ಟೆಲ್, ಬೋಧಕ ಸಿಬ್ಬಂದಿ ವಸತಿಗೃಹ ನಿರ್ಮಾಣ ಕಾಮಗಾರಿಗೆ ₹450 ಕೋಟಿ
*ತುಮಕೂರು ಜಿಲ್ಲೆ ಕುಣಿಗಲ್‌ನಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ 9.5 ಗುಂಟೆ, ಚನ್ನರಾಯಪಟ್ಟಣದ ಅಮಾನಿಕರೆ ಗ್ರಾಮದಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ 210 ಚ.ಮೀ, ಬಾಗಲಕೋಟೆ ಜಿಲ್ಲೆ ಲೋಕಾಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ 400.63 ಚ.ಮೀ ನಿವೇಶನ ನೀಡಲು ಒಪ್ಪಿಗೆ
*ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ತಂತ್ರಾಂಶ 2 ನೇ ಆವೃತ್ತಿಯನ್ನು ₹40.29 ಕೋಟಿ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸಮ್ಮತಿ
*ಕಲಬುರಗಿ ಜಿಲ್ಲೆ ಸೇಡಂ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಒಪ್ಪಿಗೆ
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನೀತಿಗೆ ಅಸ್ತು
ಕರ್ನಾಟಕದ ಯುವ ಜನತೆ ಜಾಗತಿಕ ಮಟ್ಟದಲ್ಲಿ ಉದ್ಯೋಗ ಗಿಟ್ಟಿಸುವ ನಿಟ್ಟಿನಲ್ಲಿ ಕೌಶಲ ಸಾಮರ್ಥ್ಯವನ್ನು ಹೆಚ್ಚಿಸಲು ‘ಕರ್ನಾಟಕ ಕೌಶಲ್ಯ ಅಭಿವೃದ್ಧಿ ನೀತಿ 2025–2032’ ಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು. ಕೌಶಲ್ಯ ನೀತಿ ಪ್ರಮುಖ ಅಂಶಗಳು: ಕಲಿಕೆ ಜೊತೆಗೆ ಕೌಶಲ ‘ನನ್ನ ವೃತ್ತಿ ನನ್ನ ಆಯ್ಕೆ’ ಯೋಜನೆಗೆ ಆದ್ಯತೆ. ಅಪ್ರೆಂಟಿಸ್‌ಶಿಪ್ ಐಟಿಐ ತರಬೇತಿ ಮೂಲಕ ವಿಶೇಷ ಸಹಯೋಗ. ತಾಂತ್ರಿಕ ಮತ್ತು ಕೈಗಾರಿಕಾ ಬದಲಾವಣೆಗಳಿಗೆ ತಕ್ಕಂತೆ ನಿರಂತರ ಕಲಿಕೆಗೆ ಒತ್ತು. ಮಹಿಳೆಯರು ಅಂಗವಿಕಲರು ನಗರ ಪ್ರದೇಶದ ಬಡವರು ದಮನಿತ ಸಮುದಾಯಗಳಿಗೆ ತರಬೇತಿ. ಐಟಿಐಗಳ ಆಧುನೀಕರಣ ಜಿಟಿಟಿಸಿ ವಿಸ್ತರಣೆ ಮತ್ತು ಗ್ರಾಮೀಣ ಮತ್ತು ನಗರ ಕೌಶಲ ಕೇಂದ್ರಗಳ ಸ್ಥಾಪನೆ ಮತ್ತು ಮೂಲಸೌಕರ್ಯ ಹೆಚ್ಚಳಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.