ಶುಲ್ಕ
ಬೆಂಗಳೂರು: ಬೋಧನಾ ಶುಲ್ಕ ನಿಗದಿ ಮಾಡುವಾಗ ಖಾಸಗಿ ಕಾಲೇಜು ಆಡಳಿತ ಮಂಡಳಿಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ ಮನವಿ ಮಾಡಿದೆ.
ಸ್ಪರ್ಧಾ ಪರೀಕ್ಷೆಗಳಿಗೆ ತರಬೇತಿ ನೀಡುವ ಪಿಯು ಕಾಲೇಜುಗಳಿಗೆ ನಿರ್ಬಂಧ ಹೇರಬಾರದು. ಕಟ್ಟಡ ಸುರಕ್ಷತಾ ಪ್ರಮಾಣಪತ್ರ, ಅಗ್ನಿ ಸುರಕ್ಷತಾ ಪ್ರಮಾಣಪತ್ರವನ್ನು ಪ್ರತಿ ವರ್ಷ ನವೀಕರಿಸುವ ಬದಲು ಐದು ವರ್ಷಗಳಿಗೆ ಒಮ್ಮೆ ನಿಗದಿ ಮಾಡಬೇಕು. ಸ್ಥಳೀಯ ಸಂಸ್ಥೆಗಳಿಗೆ ಪಾವತಿಸುವ ಕಟ್ಟಡ ಶುಲ್ಕದಲ್ಲಿ ರಿಯಾಯಿತಿ ಕೊಡಿಸಬೇಕು. ರೋಸ್ಟರ್ ಪದ್ಧತಿಯಲ್ಲಿ ಸಿಬಿಎಸ್‌ಇ, ಐಟಿಎಸ್‌ಇ ವಿದ್ಯಾರ್ಥಿಗಳ ಸೀಟು ಹೆಚ್ಚಿಸಬೇಕು ಎಂದು ಸಂಘದ ಅಧ್ಯಕ್ಷ ಎಂ. ಮೋಹನ್ ಆಳ್ವ, ಕಾರ್ಯದರ್ಶಿ ನರೇಂದ್ರ ಎಲ್. ನಾಯಕ್ ಅವರು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಮಾಡಿದರು.
ವಿವಿಧ ವೃತ್ತಿ ಶಿಕ್ಷಣ ಕೋರ್ಸ್‌ಗಳಿಗೆ ಸಿಇಟಿ ರ್‍ಯಾಂಕ್ ನಿಗದಿ ಮಾಡುವಾಗ ಗಣಿತದ ಆಂತರಿಕ ಅಂಕಗಳನ್ನು ಪರಿಗಣಿಸಬಾರದು. ನಕಲಿ ಪಿಯು ಕಾಲೇಜುಗಳನ್ನು ಪತ್ತೆಹಚ್ಚಿ, ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ಮನವಿ ಸ್ವೀಕರಿಸಿದ ಸಚಿವ ಮಧು ಬಂಗಾರಪ್ಪ ಅವರು, ಖಾಸಗಿ ಕಾಲೇಜುಗಳ ಬೇಡಿಕೆಯನ್ನು ಕಾಲಮಿತಿಯ ಒಳಗೆ ಪರಿಹರಿಸುವ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.