ADVERTISEMENT

ಸುಪ್ರೀಂ ಅಂಗಳಕ್ಕೆ ‘ಆಡಿಯೊ’ | ಆತಂಕದಲ್ಲಿ ಸಭೆ ಸೇರಿದ ಅನರ್ಹ ಶಾಸಕರು

ಕಾಂಗ್ರೆಸ್ ಸಲ್ಲಿಸುತ್ತಿದ್ದಂತೆ ಆತಂಕಕ್ಕೆ ಒಳಗಾದ ಅನರ್ಹರು

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 19:05 IST
Last Updated 4 ನವೆಂಬರ್ 2019, 19:05 IST
   

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅನರ್ಹ ಶಾಸಕರ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೊವನ್ನು ಸುಪ್ರೀಂ ಕೋರ್ಟ್‌ನಲ್ಲಿ ಕಾಂಗ್ರೆಸ್ ಸಲ್ಲಿಸುತ್ತಿದ್ದಂತೆ ಆತಂಕಕ್ಕೆ ಒಳಗಾದ ಅನರ್ಹರು, ಸಭೆ ನಡೆಸಿ ಮುಂದಿನ ಬೆಳವಣಿಗೆ ಬಗ್ಗೆ ಚರ್ಚಿಸಿದರು.

ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮುಂದಿನ ಬೆಳವಣಿಗೆ ಏನಾಗಲಿದೆಯೊ ಎಂಬ ಆತಂಕ ಹೊರಹಾಕಿದ್ದಾರೆ. ‘ಆಡಿಯೊವನ್ನು ಪ್ರಮುಖ ಸಾಕ್ಷಿಯನ್ನಾಗಿ ಪರಿಗಣಿಸಬೇಕು. ಪಕ್ಷಾಂತರ ಮಾಡಿರುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ?’ ಎಂದು ಕಾಂಗ್ರೆಸ್ ಪರ ವಕೀಲರು ಕೋರ್ಟ್‌ಗೆ ಮನವರಿಕೆ ಮಾಡಿಕೊಡಲು ಮುಂದಾಗಿರುವ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.

‘ಅನರ್ಹತೆ’ ಪ್ರಶ್ನಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಂಡು, ತೀರ್ಪು ಹೊರಬರುವ ಸಮಯದಲ್ಲಿ ಹೊಸ ವಿವಾದ ಸೃಷ್ಟಿಯಾಗಿರುವುದು ತಲೆಬಿಸಿ ಹೆಚ್ಚಿಸಿದೆ.ಈ ಆಡಿಯೊ ಪರಿಗಣಿಸಿದರೆ ತೀರ್ಪಿನ ಮೇಲೆ ಏನೆಲ್ಲ ಪರಿಣಾಮಗಳು ಆಗಬಹುದು. ಅದಕ್ಕೆ ನಮ್ಮ ಕಡೆಯಿಂದ ಏನು ಮಾಡಬೇಕು. ವಕೀಲರ ಮೂಲಕ ಏನೆಲ್ಲ ಹೇಳಬೇಕು ಎಂಬ ಬಗ್ಗೆ ಚರ್ಚಿಸಿದರು ಎನ್ನಲಾಗಿದೆ.

ADVERTISEMENT

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಮಯದಿಂದಲೂ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಲೇ ಇದೆ. ಈಗ ಅಂತಿಮ ಘಟ್ಟಕ್ಕೆ ಬಂದಿದ್ದು, ಮತ್ತೆ ಸಮಸ್ಯೆ ಎದುರಾಗಿರುವ ಬಗ್ಗೆ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಎಲ್ಲರೂ ಕಾಲಜ್ಞಾನಿಗಳೇ: ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ, ‘ಬಿಜೆಪಿ ಸರ್ಕಾರ ಈಗ ಬೀಳುತ್ತೆ, ಒಂದೆರಡು ತಿಂಗಳಲ್ಲೇ ಬೀಳುತ್ತದೆ ಎಂದು ಹೇಳುವ ಮೂಲಕ ಎಲ್ಲರೂ ಕಾಲಜ್ಞಾನಿಗಳಾಗಿದ್ದಾರೆ’ ಎಂದು ಸಿದ್ದರಾಮಯ್ಯ ಅವರಿಗೆ ಲೇವಡಿ ಮಾಡಿದರು.

‘ನಮ್ಮ ಶಾಸಕರಿಗೆ ಬೇಸರವಾದಾಗಲೇ ಎಚ್ಚರಿಕೆ ವಹಿಸಬೇಕಿತ್ತು. ಮೊದಲೇ ಕಾಲಜ್ಞಾನ ಗಮನಿಸಿದ್ದರೆ ಸಮ್ಮಿಶ್ರ ಸರ್ಕಾರ ಉಳಿಸಬಹುದಿತ್ತು’ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.