ಬೆಂಗಳೂರು: ‘ಮೀಸಲಾತಿ ಸೇರಿದಂತೆ ಇತರೆ ಅನುಕೂಲಗಳನ್ನು ಕಲ್ಪಿಸಬೇಕೆಂಬ ಅರಸು ಸಮುದಾಯದ ಮುಖಂಡರ ಬೇಡಿಕೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಅರಸು ಅಸೋಸಿಯೇಷನ್‌ನ ಸುವರ್ಣ ಮಹೋತ್ಸವದಲ್ಲಿ ಮಾತನಾಡಿದ ಅವರು, ‘ಸಮುದಾಯದ ಪ್ರಮುಖರು ಮತ್ತು ರಾಜ ವಂಶಸ್ಥರ ಜೊತೆ ಚರ್ಚಿಸಿ, ಬೇಡಿಕೆ ಈಡೇರಿಸುವ ಕೆಲಸ ಮಾಡಲಾಗುವುದು’ ಎಂದೂ ಆಶ್ವಾಸನೆ ನೀಡಿದರು.
‘ಮನುಷ್ಯ ಧರ್ಮವನ್ನು ಮೂಲವಾಗಿ ಇಟ್ಟುಕೊಂಡು ಮೈಸೂರು ಅರಸರು ಹಾಗೂ ಅವರ ವಂಶಸ್ಥರು ಈ ರಾಜ್ಯದ ಜನರ ಸೇವೆ ಮಾಡಿದ್ದಾರೆ. ಜಾತ್ಯತೀತ, ಧರ್ಮಾತೀತವಾಗಿ ಕರ್ನಾಟಕವನ್ನು ಕಟ್ಟಿದ ಇತಿಹಾಸ ಅರಸು ಸಮುದಾಯದ್ದು. ನಾಲ್ವಡಿ ಕೃಷ್ಣರಾಜ ಒಡೆಯರ್, ಕೆಂಪರಾಜಮ್ಮಣ್ಣಿ, ಜಯಚಾಮರಾಜೇಂದ್ರ ಒಡೆಯರ್ ಹೀಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ’ ಎಂದು ಬಣ್ಣಿಸಿದರು.
‘ಮೈಸೂರು ಮಹಾರಾಜರು ಯಾವ ಧರ್ಮದಲ್ಲಿ ನಡೆಯಬೇಕು, ಯಾವ ಧರ್ಮವನ್ನು ಉಳಿಸಿಕೊಳ್ಳಬೇಕು ಎಂದು ಯಾವತ್ತೂ ಮಾತನಾಡಲಿಲ್ಲ. ವಿದ್ಯುತ್ ಉತ್ಪಾದನೆ ಸೇರಿದಂತೆ ರಾಜ್ಯದ ಪ್ರಮುಖ ಸಂಸ್ಥೆಗಳ ಸ್ಥಾಪನೆಗೆ ಅಡಿಪಾಯ ಹಾಕಿಕೊಟ್ಟವರು ಮೈಸೂರಿನ ಒಡೆಯರು. ಅವರು ನೆಟ್ಟಿರುವ ಮರದ ಫಲವನ್ನು ನಾವೆಲ್ಲರೂ ತಿನ್ನುತ್ತಿದ್ದೇವೆ’ ಎಂದರು.
‘ದೇವರಾಜ ಅರಸು ಅವರಿಗೆ ಜಾತಿ ಇರಲಿಲ್ಲ. ಆದರೆ, ನಾಯಕತ್ವದ ಗುಣವಿತ್ತು. ಆ ಗುಣ ಅವರನ್ನು ದೊಡ್ಡ ಮಟ್ಟಕ್ಕೆ ಬೆಳೆಸಿತು. ಹಿಂದುಳಿದ ಹಾಗೂ ಮೇಲ್ವರ್ಗದ ಎಲ್ಲ ರಾಜಕಾರಣಿಗಳನ್ನು ಬೆಳೆಸಿ ಭದ್ರ ಅಡಿಪಾಯ ಕೊಟ್ಟವರು ದೇವರಾಜ ಅರಸು’ ಎಂದರು.
ಕಾಮಾಕ್ಷಿದೇವಿ, ಆತ್ಮಾನ್ಯ ದೇವ್, ಇಂದ್ರಾಕ್ಷಿ ದೇವಿ, ರಾಜಚಂದ್ರ ಅರಸ್, ಕಪ್ಪಡಿ ಕ್ಷೇತ್ರ ಮಂಟೇಸ್ವಾಮಿ ಮಠದ ಶ್ರೀಕಂಠ ಸಿದ್ದಲಿಂಗರಾಜೇ ಅರಸ್, ತಮಿಳುನಾಡು ದ್ರೋಣಗಿರಿ ಮಠದ ಅಶೋಕ ರಾಜೇಂದ್ರ ಸ್ವಾಮೀಜಿ, ರಾಜ್ಯ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಸೂರಜ್ ಹೆಗ್ಡೆ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.