ADVERTISEMENT

ಭುಗಿಲೆದ್ದ ಆಕ್ರೋಶ; ಸಾರಿಗೆ ಸಂಸ್ಥೆ ಬಸ್ ಭಸ್ಮ

3 ಬೈಕ್‌ಗೆ ಬೆಂಕಿ, 11 ಬಸ್‌ಗೆ ಹಾನಿ; ಎಲ್ಲೆಡೆ ಪ್ರತಿಭಟನೆ, ಪ್ರಧಾನಿ ಮೋದಿ ಪ್ರತಿಕೃತಿ ದಹನ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 19:24 IST
Last Updated 4 ಸೆಪ್ಟೆಂಬರ್ 2019, 19:24 IST
   

ಬೆಂಗಳೂರು: ಕಾಂಗ್ರೆಸ್‌ ಪಕ್ಷಕ್ಕೆ ಬಿಕ್ಕಟ್ಟು ಎದುರಾದಾಗಲೆಲ್ಲ ನೆರವಿಗೆ ನಿಲ್ಲುತ್ತಿದ್ದ ಶಾಸಕ ಡಿ.ಕೆ.ಶಿವಕುಮಾರ್ ಬಂಧನದ ನಂತರ ರಾಜ್ಯದ ಎಲ್ಲೆಡೆಆಕ್ರೋಶ ಭುಗಿಲೆದಿದ್ದು, ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಅವರ ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಹಣ ಅಕ್ರಮ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಂಗಳವಾರ ರಾತ್ರಿ ಶಿವಕುಮಾರ್‌ ಅವರನ್ನು ಬಂಧಿಸುತ್ತಿದ್ದಂತೆ ಪ್ರತಿಭಟನೆ ಆರಂಭವಾಗಿದ್ದು, ಬುಧವಾರ ಹಿಂಸಾ ರೂಪ ಪಡೆದುಕೊಂಡಿತು.

‘ರಾಜಕೀಯ ಹಗೆ ಸಾಧಿಸಲು ಶಿವಕುಮಾರ್ ಅವರನ್ನು ಬಂಧಿಸಲಾಗಿದೆ. ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಿದ್ದರೂ ಉದ್ದೇಶಪೂರ್ವಕವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಇದರ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ಕೈವಾಡವಿದೆ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ಇಬ್ಬರೂ ನಾಯಕರ ಪ್ರತಿಕೃತಿ, ಭಾವಚಿತ್ರಗಳನ್ನು ಸುಟ್ಟು ಸಿಟ್ಟು ಪ್ರದರ್ಶಿಸಿದರು. ರಾಮನಗರ, ಚನ್ನಪಟ್ಟಣ ಸೇರಿದಂತೆ ಕೆಲವೆಡೆ ಕಾಂಗ್ರೆಸ್ ಜತೆಗೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆಗೆ ಇಳಿದರು.

ADVERTISEMENT

ಶಿವಕುಮಾರ್ ಅವರ ತವರು ರಾಮನಗರ ಜಿಲ್ಲೆಯಲ್ಲಿ ಇಡೀ ದಿನ ಪ್ರತಿಭಟನೆಗಳು ನಡೆದು, ಜನಜೀವನ ಅಸ್ತವ್ಯಸ್ತಗೊಂಡಿತ್ತು. ಅವರ ಹುಟ್ಟೂರು ದೊಡ್ಡಾಲಹಳ್ಳಿಯ ಬಳಿ ಕೆಎಸ್‌ಆರ್‌ಟಿಸಿ ಬಸ್‌ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಪ್ರತಿಭಟನಕಾರರ ಆಕ್ರೋಶಕ್ಕೆ 3 ಬೈಕ್‌ಗಳು ಭಸ್ಮಗೊಂಡಿದ್ದು, 11 ಬಸ್‌ಗಳು ಜಖಂಗೊಂಡಿವೆ. ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಬಸ್ ಸಂಚಾರ ಇರಲಿಲ್ಲ.ದೇಗುಲಗಳಲ್ಲಿ ವಿಶೇಷ ಪೂಜೆ, ಕೇಶ ಮುಂಡನವೂ ನಡೆಯಿತು.

ಕುಣಿಗಲ್ ಬಂದ್ ಯಶಸ್ವಿಯಾಗಿದ್ದು, ಈ ವೇಳೆ ಅಂಗಡಿ ಬಾಗಿಲು ಮುಚ್ಚದ ಮಾಲೀಕರೊಬ್ಬರನ್ನು ಥಳಿಸಲಾಗಿದೆ.ಹನೂರಿನಲ್ಲಿ ಬಂದ್ ಆಚರಿಸಲಾಯಿತು. ಮಂಗಳೂರಿನಲ್ಲಿ ಖಾಸಗಿ ಬಸ್‌ಗಳ ಮೇಲೆ ಕಲ್ಲು ತೂರಾಟ ಮಾಡಲಾ
ಗಿದೆ. ಚಳ್ಳಕೆರೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚುವಾಗ 8 ಮಂದಿಗೆ ಸುಟ್ಟ ಗಾಯಗಳಾಗಿವೆ.

ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮೈಸೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಸಿದ್ದರಾಮಯ್ಯ ಅವರು ಮಳೆಯಲ್ಲೇ ನಿಂತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಮಡಿಕೇರಿಯಲ್ಲಿ ಜೋರು ಮಳೆಯ ನಡುವೆ ಕಾರ್ಯಕರ್ತರು ಪ್ರತಿಭಟನೆಗೆ ಇಳಿದರು.

ನಷ್ಟ: ರಾಜ್ಯದ ವಿವಿಧೆಡೆ 18 ಬಸ್‌ಗಳು ಜಖಂಗೊಂಡಿದ್ದು, ₹13.67 ಲಕ್ಷ ನಷ್ಟ ಉಂಟಾಗಿದೆ.

ಇಂದು ಬಂದ್: ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಗುರುವಾರ ರಾಮನಗರ ಜಿಲ್ಲಾ ಬಂದ್‌ಗೆ ಜಂಟಿಯಾಗಿ ಕರೆ ನೀಡಿವೆ. ಗುರುವಾರ ಜಿಲ್ಲೆಯ ಎಲ್ಲ ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಶಿವಕುಮಾರ್‌ಗೂ ಬಿಜೆಪಿ ಗಾಳ: ಸಿದ್ದರಾಮಯ್ಯ

‘ಪಕ್ಷಕ್ಕೆ ಬರುವಂತೆ ಡಿ.ಕೆ.ಶಿವಕುಮಾರ್ ಅವರಿಗೆ ಬಿಜೆಪಿ ಗಾಳ ಹಾಕಿತ್ತು. ಇವರ ಮೇಲಿದ್ದ ಪ್ರಕರಣವನ್ನು ಕೈಬಿಡುವ ಆಮಿಷವನ್ನೂ ಒಡ್ಡಿತ್ತು. ಇದಕ್ಕೆ ಸೊಪ್ಪು ಹಾಕದ್ದಕ್ಕೆ ಬಂಧಿಸಲಾಗಿದೆ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮೈಸೂರಿನಲ್ಲಿ ಆರೋಪಿಸಿದರು.

‌‘ಬ್ಲ್ಯಾಕ್‌ಮೇಲ್‌’ಗೆ ಬಗ್ಗದವರಿಗೆ ಇ.ಡಿ, ಐ.ಟಿ ಗುಮ್ಮ ಬಿಡುವ ಮೂಲಕ ಹೆದರಿಸುತ್ತಿದೆ. ಗುಜರಾತ್ ಕಾಂಗ್ರೆಸ್‌ ಶಾಸಕರಿಗೆ ರಕ್ಷಣೆ ಕೊಟ್ಟಿದ್ದಕ್ಕೆ ಸೇಡು ತೀರಿಸಿಕೊಳ್ಳುತ್ತಿದೆ. ಚಿದಂಬರಂ ಮೇಲೂ ಇದೇ ಬಗೆಯಲ್ಲಿ ಕ್ರಮ ಕೈಗೊಂಡಿದ್ದು, ಇಂತಹ ಬೆದರಿಕೆ ತಂತ್ರಗಳಿಗೆ ಬಗ್ಗುವುದಿಲ್ಲ ಎಂದರು.

ನಿಷ್ಕರುಣೆಯ ನಿರ್ಧಾರ: ದೇವೇಗೌಡ

ಶಿವಕುಮಾರ್ ವಿಚಾರಣೆಗೆ ಸಹಕಾರ ನೀಡಿದ್ದರೂ ಕುಟುಂಬದ ಕಾರ್ಯ ನೆರವೇರಿಸಲು ಅಧಿಕಾರಿಗಳು ಅವಕಾಶ ನೀಡದೆ, ನಿಷ್ಕರುಣೆಯಿಂದ ನಡೆದುಕೊಂಡಿದ್ದಾರೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ತಂದೆ ಕಾರ್ಯಕ್ಕೂ ಅವಕಾಶ ನೀಡದಿರುವ ಘಟನೆ ಆಘಾತ ಉಂಟು ಮಾಡಿದೆ. ಒಂದು ದಿನ ಅವಕಾಶ ನೀಡಿದ್ದರೆ ಏನಾಗುತಿತ್ತು’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.