ADVERTISEMENT

ಜನರಹಿತ ಸ್ಥಳಕ್ಕೆ ಕಸ ವಿಲೇವಾರಿ ಘಟಕ ಸ್ಥಳಾಂತರ: ಡಿಸಿಎಂ ಶಿವಕುಮಾರ್‌

ಪರ್ಯಾಯ ಜಾಗ ಗುರುತಿಸಲು ಕ್ರಮ: ಡಿಸಿಎಂ ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2023, 16:42 IST
Last Updated 10 ಅಕ್ಟೋಬರ್ 2023, 16:42 IST
ಡಿಕೆ ಶಿವಕುಮಾರ್‌
ಡಿಕೆ ಶಿವಕುಮಾರ್‌    

ಬೆಂಗಳೂರು: ‘ಯಶವಂತಪುರ ವಿಧಾನಸಭೆ ಕ್ಷೇತ್ರದ ಐದು, ಬ್ಯಾಟರಾಯಐನಪುರದ ಎರಡು ಹಾಗೂ ದಾಸರಹಳ್ಳಿ, ಆನೇಕಲ್, ಮಹದೇವಪುರ ಕ್ಷೇತ್ರದಲ್ಲಿರುವ ಕಸ ವಿಲೇವಾರಿ ಘಟಕಗಳನ್ನು ನಗರದ ಹೊರಭಾಗದಲ್ಲಿರುವ ಜನರಹಿತ ಪ್ರದೇಶಕ್ಕೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ’ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಜಲಸಂಪನ್ಮೂಲ, ಅರಣ್ಯ ಇಲಾಖೆ ಮತ್ತು ಬೆಂಗಳೂರು ನಗರಾಭಿವೃದ್ಧಿ ಇಲಾಖೆಗಳ ಸಮನ್ವಯ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ, ಪರ್ಯಾಯ ಜಾಗಗಳನ್ನು ಗುರುತಿಸಲಾಗುವುದು’ ಎಂದರು.

‘ಬೆಂಗಳೂರು ಬೃಹತ್‌ ಪ್ರಮಾಣದಲ್ಲಿ ಬೆಳೆದ ಪರಿಣಾಮ ಕಸ ವಿಲೇವಾರಿ ಘಟಕಗಳು ನಗರದ ಹೃದಯ ಭಾಗಕ್ಕೆ ಬಂದಿವೆ. ಈ ಘಟಕಗಳ ಸುತ್ತಮುತ್ತಲಿನ 4–5 ಕಿ.ಮೀ. ವ್ಯಾಪ್ತಿಯ ನಾಗರಿಕರು ನರಕ ಯಾತನೆ ಅನುಭವಿಸುತ್ತಿದ್ದಾರೆ. ಬ್ಯಾಟರಾಯನಪುರ ಶಾಸಕರೂ ಆಗಿರುವ ಸಚಿವ ಕೃಷ್ಣ ಬೈರೇಗೌಡ, ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಮತ್ತಿತರರು ಕಸ ವಿಲೇವಾರಿ ಘಟಕ ಸ್ಥಳಾಂತರಿಸುವಂತೆ ಮನವಿ ಸಲ್ಲಿಸಿದ್ದರು’ ಎಂದರು.

‘ಕಸ ವಿಲೇವಾರಿ ಘಟಕಕ್ಕಾಗಿ ನಗರದ ನಾಲ್ಕೂ ಮೂಲೆಗಳಲ್ಲಿ ಅರಣ್ಯ ಪ್ರದೇಶದ ಗಡಿಭಾಗಗಳಲ್ಲಿ 100 ಎಕರೆ ಜಾಗ ನೀಡುವಂತೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಮನವಿ ಮಾಡಲಾಗಿದೆ. ಸರ್ವೇ ಮಾಡಿದ ಬಳಿಕ ಜಾಗ ಸಿಗಲಿದೆ. ಅದಕ್ಕೆ ಪ್ರತಿಯಾಗಿ ಅರಣ್ಯ ಇಲಾಖೆಗೆ ಪರ್ಯಾಯ ಜಾಗ ನೀಡಲಾಗುವುದು ಅಥವಾ ಖರೀದಿ ಮಾಡಲಾಗುವುದು’ ಎಂದರು.

ADVERTISEMENT

ಜಲ ಮಂಡಳಿಗೆ ಸೌರ ವಿದ್ಯುತ್ ಘಟಕ: ‘ತಿಪ್ಪಗೊಂಡನಹಳ್ಳಿಯಲ್ಲಿ 300 ಎಕರೆ, ಹೆಸರಘಟ್ಟದಲ್ಲಿ 100 ಎಕರೆ ಜಮೀನಿದೆ. ಇಲ್ಲಿ ಜಲ ಮಂಡಳಿಗೆ ಸೌರ ವಿದ್ಯುತ್ ಉತ್ಪಾದನಾ ಘಟಕ ನಿರ್ಮಿಸುವ ಚಿಂತನೆಯಿದೆ’ ಎಂದು ಶಿವಕುಮಾರ್‌ ತಿಳಿಸಿದರು.

ಪರ್ಯಾಯ ಜಾಗ: ‘ಮೇಕೆದಾಟು ಯೋಜನೆ ಜಾರಿ ವಿಚಾರವಾಗಿ ಈ ಭಾಗದ ಜನರಿಗೆ ಪರ್ಯಾಯ ಜಾಗಗಳನ್ನು ಗುರುತಿಸಲಾಗಿದೆ. ಚಾಮರಾಜನಗರ, ಮಂಡ್ಯ, ರಾಮನಗರದಲ್ಲಿ ಜಾಗ ಗುರುತಿಸಲಾಗಿದೆ’ ಎಂದರು.

‘ಬಿಎಂಆರ್‌ಡಿ ಯೋಜನೆಗಳಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಜೊತೆಗಿನ ಸಮಸ್ಯೆಗಳನ್ನು ಚರ್ಚಿಸಿದ್ದೇವೆ. ಕಾವೇರಿ ನೀರಿನ‌ ಪೈಪ್‌ಲೈನ್‌ ಸುಮಾರು 100 ಮೀಟರ್‌ನಷ್ಟು ಅರಣ್ಯ ಜಾಗದಲ್ಲಿ ಬರುತ್ತಿದೆ. ಆದರೆ, ಅರಣ್ಯ ಇಲಾಖೆ ಅವಕಾಶ ನೀಡದ ಕಾರಣ ಈ ಯೋಜನೆಯನ್ನು ತಡೆಹಿಡಿಯಲಾಗಿದೆ. ಪರ್ಯಾಯ ಜಾಗ ನೀಡುವುದಾಗಿ ತಿಳಿಸಲಾಗಿದೆ. ಬೆಂಗಳೂರಿನ ಸುತ್ತಮುತ್ತ ಆನೆ ಮತ್ತು ಚಿರತೆ ದಾಳಿಗಳು ಹೆಚ್ಚಾಗುತ್ತಿವೆ. ಈ ವಿಚಾರವನ್ನು ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.