ADVERTISEMENT

ಕಣ್ಣೀರು ಕಥನಗಳ ಬಹಿರಂಗ ಚರ್ಚೆ: ಕೇಂದ್ರ ಸಚಿವ ಕುಮಾರಸ್ವಾಮಿಗೆ ಡಿಕೆಶಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 15:40 IST
Last Updated 6 ಜೂನ್ 2025, 15:40 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ಬೇರೆಯವರು ಯಾವಾಗ ಕಣ್ಣೀರು ಹಾಕಿದ್ದಾರೆ. ಎಷ್ಟು ಕುಟುಂಬಗಳಿಗೆ ಕಣ್ಣೀರು ಹಾಕಿಸಿದ್ದಾರೆ, ಎಷ್ಟು ಕುಟುಂಬಗಳ ಕಣ್ಣೀರು ಒರೆಸಿದ್ದಾರೆ ಎಂದು ಬಹಿರಂಗ ಚರ್ಚೆ ಮಾಡೋಣ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕಾಲ್ತುಳಿತದಲ್ಲಿ ಮೃತರಾದವರ ನೆನೆದು ನಾನು ಭಾವುಕನಾಗಿದ್ದಕ್ಕೆ ಕಣ್ಣಲ್ಲಿ ನೀರು ಬಂತು. ಅದನ್ನೂ ಟೀಕೆ ಮಾಡಿದ್ದಾರೆ, ಪರವಾಗಿಲ್ಲ. ಇವರು ಯಾವ, ಯಾವ ಸಂದರ್ಭದಲ್ಲಿ, ಎಲ್ಲೆಲ್ಲಿ ಕಣ್ಣೀರಾಕಿದ್ದಾರೆ? ಅವು ಏನಾದವು? ಯಾವ ಜಿಲ್ಲೆಯಲ್ಲಿ ಸುರಿಸಿದ ಕಣ್ಣೀರು ಏನಾಯ್ತು? ಎಷ್ಟು ಕುಟುಂಬಗಳು ಕಣ್ಣೀರು ಹಾಕಿದ್ದವು? ಇವರು ಎಷ್ಟು ಕುಟುಂಬಗಳ ಕಣ್ಣೀರು ಒರೆಸಿದ್ದಾರೆ? ಈ ಎಲ್ಲಾ ವಿಚಾರಗಳನ್ನು ಅಧಿವೇಶನದಲ್ಲಿ ಚರ್ಚೆ ಮಾಡಲಿ, ದಾಖಲೆಗಳು ಶಾಶ್ವತವಾಗಿ ಉಳಿಯುತ್ತವೆ’ ಎಂದರು.

‘ನನಗೆ ಯಾವುದೇ ಇಮೇಜ್‌ನ ಅಗತ್ಯವಿಲ್ಲ. ಜನರು ಕೊಟ್ಟಿರುವ ಇಮೇಜ್‌ ಬೇಕಾದಷ್ಟಿದೆ. ಆರ್‌ಸಿಬಿ ಗೆದ್ದ ಖುಷಿಯಲ್ಲಿ ಯುವ ಅಭಿಮಾನಿಗಳು ಸಂಭ್ರಮಾಚರಣೆ ಮಾಡಲು ಬಯಸಿದ್ದಕ್ಕೆ ಬಿಜೆಪಿ, ಜೆಡಿಎಸ್‌ ನಾಯಕರು ಏನೆಲ್ಲಾ ಹೇಳಿಕೆ ನೀಡಿದ್ದರು. ನಂತರ ಹೇಗೆ ಉಲ್ಟಾ ಹೊಡೆದರು ಎನ್ನುವುದನ್ನು ಬಹಿರಂಗಪಡಿಸಲಿ. ಹೆಣದ ಮೇಲೆ ಮಾಡುವ ಹೀನ ರಾಜಕಾರಣ’ ಎಂದು ಟೀಕಿಸಿದರು. 

ADVERTISEMENT

‘ಕೆಎಸ್‌ಸಿಎ ಕಾರ್ಯಕ್ರಮ ಆಯೋಜನೆ ಮಾಡಿತ್ತು. ನಾನು ಬೆಂಗಳೂರು ನಗರದ ಸಚಿವ. ಪರಿಸ್ಥಿತಿ ಗಂಭೀರವಾಗುತ್ತಿದೆ. 10 ನಿಮಿಷದಲ್ಲಿ ಕಾರ್ಯಕ್ರಮ ಮುಗಿಸಬೇಕು ಎಂದು ಅಧಿಕಾರಿಗಳು ಕೇಳಿಕೊಂಡರು. ಹಾಗಾಗಿ, ಕ್ರೀಡಾಂಗಣಕ್ಕೆ ಹೋಗಿದ್ದೆ. ಪೊಲೀಸ್‌ ಅಧಿಕಾರಿಗಳು ಬಹಿರಂಗ ಮೆರವಣಿಗೆಗೆ ಅವಕಾಶ ಬೇಡ ಎಂದಿದ್ದರಿಂದ ಅವರ ಜತೆ ಚರ್ಚೆ ಮಾಡಿದೆ. ಅವರಿಗೆ ಪರಿಸ್ಥಿತಿ ವಿವರಿಸಿದೆ. ಮಧ್ಯಾಹ್ನ 3.30ರ ವೇಳೆಗೆ ಅಭಿಮಾನಿಯೊಬ್ಬರು ಮೃತಪಟ್ಟಿದ್ದರು ಎಂಬ ಮಾಹಿತಿ ಇರಲಿಲ್ಲ’ ಎಂದು ಸ್ಪಷ್ಟನೆ ನೀಡಿದರು. 

ಸಂಭ್ರಮಾಚರಣೆ ವೇಳೆ ನಡೆದ ದುರಂತದ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ವಿರೋಧ ಪಕ್ಷಗಳು ಕೇಳುತ್ತಿವೆ. ರಾಜೀನಾಮೆ ನೀಡಿ ಅವರ ಆಸೆ ಈಡೇರಿಸೋಣ
ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿ
‘ಕುಮಾರಸ್ವಾಮಿಗೆ ನನ್ನ ಮೇಲೆ ಲವ್‌’
‘ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ನನ್ನನ್ನು ಕಂಡರೆ ಬಹಳ ಪ್ರೀತಿ. ಅದಕ್ಕಾಗಿಯೇ ನನ್ನ ರಾಜೀನಾಮೆ ಕೇಳುತ್ತಿದ್ದಾರೆ’ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು. ‘ನನ್ನ ಹಾಗೂ ಸರ್ಕಾರದ ವಿರುದ್ಧ ಜಂಟಿ ಹೋರಾಟ ಮಾಡುವುದಾಗಿ ಬಿಜೆಪಿ–ಜೆಡಿಎಸ್‌ ಹೇಳಿವೆ. ಅವರು ಲೋಕಸಭಾ ಚುನಾವಣೆಯ ನಂತರ ಜಂಟಿಯಾಗಿಯೇ ಇದ್ದಾರೆ. ಇನ್ನೂ 10 ಜನರನ್ನು ಹೆಚ್ಚಿಗೆ ಸೇರಿಸಿಕೊಂಡು ಹೋರಾಟ ಮಾಡಲಿ. ತೆರೆಮರೆಯಲ್ಲಿ ಯಾರು ಏನು ಮಾಡುತ್ತಿದ್ದಾರೆ ಎಂಬುದು ನಮಗೂ ಗೊತ್ತಿದೆ’ ಎಂದರು.
ಬಿಜೆಪಿ ರಾಜಕೀಯ ಮಾಡುತ್ತಿದೆ: ಸಿದ್ದರಾಮಯ್ಯ
‘ಕಾಲ್ತುಳಿತದ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಮತ್ತು ರಾಜಕೀಯಕ್ಕಾಗಿ ಅವರು ಮಾತನಾಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು ‘ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಲಾಗಿದೆ’ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ‘ಈ ವಿಚಾರದಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ಮೇಲ್ನೋಟಕ್ಕೆ ಯಾರು ಜವಾಬ್ದಾರರು ಇದ್ದಾರೆ ಯಾರು ಲೋಪ ಎಸಗಿದ್ದಾರೆ ಅಂತಹವರ ಮೇಲೆ ಮಾತ್ರ ಕ್ರಮ ಕೈಗೊಂಡಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.