ಬೆಂಗಳೂರು: ಜಲಸಂಪನ್ಮೂಲ ಇಲಾಖೆ ಹಾಗೂ ಬಿಬಿಎಂಪಿಯಿದ್ದಾಗ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಜ್ಯೇಷ್ಠತೆ ಆಧಾರದಲ್ಲಿ ಶೀಘ್ರವೇ ಬಿಲ್ ಪಾವತಿ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ರಾಜ್ಯ ಗುತ್ತಿಗೆದಾರರ ಸಂಘ ಹಾಗೂ ಬಿಬಿಎಂಪಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಿಂದ ಮನವಿ ಸ್ವೀಕರಿಸಿದ ಅವರು, ‘ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುತ್ತದೆ’ ಎಂದು ಆಶ್ವಾಸನೆ ನೀಡಿದರು.
‘ನಾಲ್ಕು ನೀರಾವರಿ ನಿಗಮಗಳಲ್ಲಿ ಮೂರು ವರ್ಷದಿಂದ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿಗೆ ಹಣ ಬಿಡುಗಡೆ ಆಗಿಲ್ಲ. ₹50 ಲಕ್ಷದಿಂದ ₹3 ಕೋಟಿವರೆಗೆ ಬಾಕಿ ಇರುವ ಬಿಲ್‌ಗಳ ಪಾವತಿಸಲು ಆದ್ಯತೆ ನೀಡಬೇಕು. ಕಾಯ್ದೆ ಪಾಲಿಸದೆ ಬಿಲ್ ಬಿಡುಗಡೆ ಮಾಡಲಾಗುತ್ತಿದ್ದು, ಜ್ಯೇಷ್ಠತೆ ಆಧಾರದಲ್ಲೇ ಪಾವತಿ ಮಾಡಬೇಕು’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಮನವಿ ಮಾಡಿದರು.
‘ಕಾಮಗಾರಿ ಮುಗಿದು ಹತ್ತು ವರ್ಷವಾಗಿದ್ದರೂ, ಠೇವಣಿ ಹಾಗೂ ಭದ್ರತಾ ಹಣವನ್ನು ನೀರಾವರಿ ನಿಗಮಗಳ ಅಧಿಕಾರಿಗಳು ಬಿಡುಗಡೆ ಮಾಡಿಲ್ಲ’ ಎಂದು ದೂರಿದರು.
‘ಗುತ್ತಿಗೆದಾರರ ₹50 ಲಕ್ಷದವರೆಗೆ ಬಿಲ್ ಪಾವತಿಗೆ ಕೂಡಲೇ ಆದೇಶ ಮಾಡುತ್ತೇನೆ. ಎಲ್‌ಒಸಿ, ಠೇವಣಿ, ಭದ್ರತೆ ಹಣ ಬಿಡುಗಡೆ ಸೂಚಿಸುತ್ತೇನೆ. ಬಾಕಿಯಿರುವ ಬಿಲ್ ಪಾವತಿಯನ್ನು ಜ್ಯೇಷ್ಠತೆ ಆಧಾರದಲ್ಲೇ ಮಾಡುವಂತೆ ತಾಕೀತು ಮಾಡುತ್ತೇನೆ’ ಎಂದು ಶಿವಕುಮಾರ್ ಹೇಳಿದರು.
‘ಬಿಬಿಎಂಪಿ ವ್ಯಾಪ್ತಿಯಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಬಿಲ್ ಪಾವತಿ ಎರಡು ವರ್ಷಗಳಿಂದ ಬಾಕಿ ಉಳಿದಿದೆ. ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್) ಮೂಲಕ ಮುಗಿದಿರುವ ಕಾಮಗಾರಿಗಳಿಗೆ ಐದಾರು ವರ್ಷದಿಂದ ಬಿಲ್ ಬಾಕಿ ಉಳಿದಿದ್ದು, ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ನಂದಕುಮಾರ್ ಮನವಿ ಮಾಡಿದರು.
ಜಿಬಿಎಯಿಂದ ಬಿಡುಗಡೆ:
‘ಬಿಬಿಎಂಪಿಯಿದ್ದಾಗ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ (ಜಿಬಿಎ) ₹750 ಕೋಟಿ ಹಣ ಬಿಡುಗಡೆ ಮಾಡಲಾಗುತ್ತದೆ. ಇನ್ನೊಂದು ತಿಂಗಳಲ್ಲಿ ಎಲ್ಲ ಬಾಕಿ ಬಿಲ್ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಶಿವಕುಮಾರ್ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.