
ಬೆಂಗಳೂರು: ‘ನಾನು ಎಲ್ಲ ರೀತಿಯ ಅಧ್ಯಯನ ನಡೆಸಿದ್ದೇನೆ. ಲಾಲ್‌ಬಾಗ್ ಹಾಳು ಮಾಡಲು ನಾನೇನು ಮೂರ್ಖನಲ್ಲ. ಇದರ ಇತಿಹಾಸವೂ ನನಗೆ ಗೊತ್ತಿದೆ. ಉದ್ಯಾನದಲ್ಲಿ ಎಷ್ಟು ಭಾಗ ಉಪಯೋಗವಾಗುತ್ತಿದೆ ಎಂಬುದು ನನಗೆ ಗೊತ್ತಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
‘ಅಶೋಕ ಅವರ ನೇತೃತ್ವದಲ್ಲಿಯೇ ಸಮಿತಿ ಮಾಡುತ್ತೇವೆ. ಯಾರನ್ನು ಬೇಕಾದರೂ ಅದಕ್ಕೆ ಸೇರಿಸಿಕೊಳ್ಳಲಿ. ಅವರು ಸೂಚಿಸಿದ ತಾಂತ್ರಿಕ ಪರಿಣಿತರನ್ನೇ ಸಮಿತಿಗೆ ಸೇರಿಸೋಣ. ಮೆಟ್ರೊ ಮಾರ್ಗ ಹೋಗುವುದು ಟನಲ್ ಮೂಲಕ ಅಲ್ಲವೇ? ಈ ಯೋಜನೆ ತಂದವರು ಯಾರು? ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಹತ್ತು ದೇಶಗಳನ್ನು ತಿರುಗಿ ಅಧ್ಯಯನ ನಡೆಸಿ ವರದಿ ಮಾಡಿದ್ದೆ. ಎಸ್.ಎಂ. ಕೃಷ್ಣ ಅನಂತಕುಮಾರ್ ಹಾಗೂ ನಾನು ದೆಹಲಿಗೆ ತೆರಳಿ ಅಂದಿನ ಪ್ರಧಾನಿ ವಾಜಪೇಯಿ ಅವರಿಗೆ ವರದಿ ನೀಡಿದ್ದೆವು’ ಎಂದು ಹೇಳಿದರು.
‘ಸಂಸದ ತೇಜಸ್ವಿ ಸೂರ್ಯ ರೈಲು ಯೋಜನೆ ಮಾಡಿ ಎಂದು ಹೇಳುತ್ತಾನೆ. ಅದಕ್ಕೆ ಬೆಂಗಳೂರಿನಲ್ಲಿ ಜಾಗ ಎಲ್ಲಿದೆ? ಕೇಂದ್ರ ಸರ್ಕಾರವೇ ಈ ಯೋಜನೆ ಮಾಡಲಿ. ಬಿಆರ್ ಟಿಎಸ್ ಯೋಜನೆ ಮಾಡಲು ಬೆಂಗಳೂರಿನಲ್ಲಿ ಎಲ್ಲಾದರೂ ಜಾಗ ಇದೆಯೇ? ಅವರಿಗೆ ತಲೆ ಇದೆಯೇ? ಇದರಿಂದ ದಿನಕ್ಕೆ ನೂರಾರು ಜನ ಸಾಯಬೇಕಾಗುತ್ತದೆ. ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಅವರು ಬಿಆರ್ ಟಿಎಸ್ ಯೋಜನೆಯಲ್ಲಿ ವಿಫಲರಾದರು’ ಎಂದು ತಿಳಿಸಿದರು.
‘ತೇಜಸ್ವಿ ಸೂರ್ಯ ಮದುವೆಯಾಗುವ ಸಂದರ್ಭದಲ್ಲಿ ಹೊಸ ಕಾರು ಬೇಕು ಎಂದು ಅರ್ಜಿ ನೀಡಿದ್ದ. ಈಗ ಬೇರೆಯವರಿಗೆ ಕಾರಲ್ಲಿ ಓಡಾಡಬೇಡಿ ಎಂದು ಹೇಳುತ್ತಿದ್ದಾನೆ. ತೇಜಸ್ವಿ ಸೂರ್ಯ ಮತ್ತು ಬಿಜೆಪಿ ನಾಯಕರು ಕಾರು ಬಿಟ್ಟು ಮೆಟ್ರೊದಲ್ಲಿ ಓಡಾಡಲಿ’ ಎಂದು ಡಿ.ಕೆ. ಶಿವಕುಮಾರ್ ಸಲಹೆ ನೀಡಿದರು.
‘ನಾನು ಯಾರಿಗೂ ಧಮ್ಕಿ ಹಾಕಿಲ್ಲ. ಶಾಸಕ ರಾಮಮೂರ್ತಿ ನಮ್ಮ ಹುಡುಗ. ತೇಜಸ್ವಿ ಸೂರ್ಯ ಅತಿ ಬುದ್ಧಿವಂತ. ವಿಮಾನದಲ್ಲಿ ತುರ್ತು ನಿರ್ಗಮನ ಬಾಗಿಲನ್ನೇ ತೆರೆಯಲು ಹೋಗಿದ್ದ. ಅನುಮತಿ ಇಲ್ಲದೆ ಟ್ರಂಪ್ ಭೇಟಿ ಮಾಡಲು ಹೋಗಿ ಉಗಿಸಿಕೊಂಡಿದ್ದ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.