ಡಿಕೆಶಿ
ಬೆಂಗಳೂರು: ‘ತಪ್ಪು ಗ್ರಹಿಕೆಯಿಂದ ಕೆಲವರು ‘ಕಾವೇರಿ ಆರತಿ’ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಮ್ಮೆ ಎಲ್ಲರ ಜತೆ ಸಭೆ ಮಾಡುತ್ತೇನೆ. ಈ ಕಾರ್ಯಕ್ರಮ ನಡೆಯಲಿದೆ’ ಎಂದು ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕಾವೇರಿ ಆರತಿ ಕಾರ್ಯಕ್ರಮ ಕುರಿತಂತೆ ಮಂಡ್ಯ ಜಿಲ್ಲೆಯ ರೈತ ಹಾಗೂ ಇತರೆ ಸಂಘಟನೆಗಳ ಮುಖಂಡರು ಹಾಗೂ ಜನಪ್ರತಿನಿಧಿಗಳ ಜೊತೆ ಬುಧವಾರ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಮುಂದಿನ 2–3 ದಿನಗಳಲ್ಲಿ ಕಾವೇರಿ ಆರತಿ ಕಾರ್ಯಕ್ರಮದ ಸ್ವರೂಪ ಪ್ರಕಟಿಸಲಾಗುವುದು. ಕಾರ್ಯಕ್ರಮಕ್ಕೆ ಜಲಸಂಪನ್ಮೂಲ, ಧಾರ್ಮಿಕ ದತ್ತಿ, ಕನ್ನಡ ಮತ್ತು ಸಂಸ್ಕೃತಿ, ಪಿಡಬ್ಲ್ಯೂಡಿ, ಪ್ರವಾಸೋದ್ಯಮ ಮತ್ತು ಇಂಧನ ಇಲಾಖೆಗಳಿಂದ ಅನುದಾನ ನೀಡಲಾಗುವುದು’ ಎಂದರು.
‘ದೇಶದಲ್ಲಿ ಗಂಗಾ ಆರತಿ, ನಮ್ಮ ರಾಜ್ಯದಲ್ಲಿ ತುಂಗಾ ಆರತಿ ಕಾರ್ಯಕ್ರಮ ಮಾಡಲಾಗುತ್ತಿದೆ. ಈಗ ಕಾವೇರಿ ಆರತಿ ಮಾಡಲು ನಾವು ತೀರ್ಮಾನಿಸಿದ್ದೇವೆ. ಕೆಆರ್‌ಎಸ್ ಬೃಂದಾವನ ಉದ್ಯಾನಕ್ಕೆ ಸಾವಿರಾರು ಪ್ರವಾಸಿಗರು ಬರುತ್ತಿದ್ದು, ಇದನ್ನು ಮತ್ತಷ್ಟು ಹೆಚ್ಚಿಸಬೇಕು. ಇದಕ್ಕಾಗಿ ನಾವು ಇದರ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಬೇಕು. ಕಾವೇರಿ ಮಾತೆಗೆ ಪ್ರಾರ್ಥಿಸುವುದು, ಉದ್ಯೋಗ ಸೃಷ್ಟಿ, ಸಂಸ್ಕೃತಿ ಪರಂಪರೆ ಉಳಿಸಲು, ಪ್ರವಾಸೋದ್ಯಮದ ಆಕರ್ಷಣೆಗೆ ಈ ಕಾರ್ಯಕ್ರಮ ರೂಪಿಸಲಾಗಿದೆ’ ಎಂದರು.
‘ಕಾವೇರಿ ಆರತಿಯ ಪ್ರಾಯೋಗಿಕ ಕಾರ್ಯಕ್ರಮವಾಗಿ ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಕಾರ್ಯಕ್ರಮ ಮಾಡಲಾಗಿದೆ. ಇದರ ವಿರುದ್ಧ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದರೂ ಕೊನೆಗೆ ನ್ಯಾಯಾಲಯ ಕಾರ್ಯಕ್ರಮಕ್ಕೆ ಅನುಮತಿ ನೀಡಿತು. ಆ ಕಾರ್ಯಕ್ರಮದಲ್ಲಿ ಸುಮಾರು 25 ಸಾವಿರ ಜನ ಬಂದು ವೀಕ್ಷಣೆ ಮಾಡಿದರು. ಇದು ಜನರ ಭಾವನೆ. ತಾಯಿ ಕಾವೇರಿ ಎಲ್ಲ ವರ್ಗದ ಆಸ್ತಿ. ಕಾವೇರಿ ಇಲ್ಲವಾದರೆ ಬೆಂಗಳೂರಿಗೆ ನೀರಿಲ್ಲ, ಕೈಗಾರಿಕೆ, ಕೃಷಿಗೆ ನೀರಿರುವುದಿಲ್ಲ. ನಮ್ಮ ರಾಜ್ಯ ಹಾಗೂ ತಮಿಳುನಾಡಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮೇಕೆದಾಟು ಯೋಜನೆಗೆ ಅನುಮತಿ ಪಡೆಯಲು ಹೋರಾಟ ಮಾಡುತ್ತಿದ್ದೇವೆ’ ಎಂದರು.
‘ಕಾವೇರಿ ಆರತಿ ಕಾರ್ಯಕ್ರಮಕ್ಕೆ ಕೆಲವರು ಅಪಸ್ವರ ಎತ್ತಿದ್ದಾರೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಮಾಹಿತಿ ನೀಡಿದರು. ಹೀಗಾಗಿ ನಾನು ಸಭೆ ಮಾಡಿದೆ. ಕಾರ್ಯಕ್ರಮಕ್ಕೆ ಅನೇಕರು ಬೆಂಬಲ ವ್ಯಕ್ತಪಡಿಸಿದ್ದು, ಜನಪ್ರತಿನಿಧಿಗಳು ಕೂಡ ಸ್ವಾಗತಿಸಿದರು. ಮತ್ತೊಮ್ಮೆ ಎಲ್ಲರನ್ನು ಕರೆದು ಮಾತನಾಡಲಾಗುವುದು’ ಎಂದು ತಿಳಿಸಿದರು.
‘ಚಾಮುಂಡಿ ಬೆಟ್ಟದಲ್ಲಿ ಪ್ರಾಧಿಕಾರ ರಚನೆ ಮಾಡಿ ಅಭಿವೃದ್ಧಿ ಮಾಡಲಾಗುತ್ತಿದೆ. ಟಿವಿಎಸ್ ಸೇರಿದಂತೆ ಅನೇಕ ಕಂಪನಿಗಳು ತಮ್ಮ ಸಿಎಸ್ಆರ್ ನಿಧಿಯಲ್ಲಿ ದೇವಾಲಯಗಳ ಅಭಿವೃದ್ಧಿ ಮಾಡುತ್ತಿದ್ದಾರೆ’ ಎಂದರು.
‘ಅಣೆಕಟ್ಟೆಗೆ ತೊಂದರೆ ಆಗುವುದಿಲ್ಲ’: ‘ರೈತರು ಯಾವ ಕಾರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಕೇಳಿದಾಗ, ‘ಈ ಕಾರ್ಯಕ್ರಮದಿಂದ ಅಣೆಕಟ್ಟೆಗೆ ಏನಾದರೂ ತೊಂದರೆ ಆಗಬಹುದು ಎಂಬ ಕಾರಣಕ್ಕೆ ಅಪಸ್ವರ ಎತ್ತಿದ್ದರು. ಈ ಕಾರ್ಯಕ್ರಮ ನಡೆಯುವ ಜಾಗ ಅಣೆಕಟ್ಟಿನಿಂದ ಸಾಕಷ್ಟು ದೂರದಲ್ಲಿದೆ. ಬೆಂಗಳೂರಿಗೆ ನೀರು ಹರಿದು ಹೋಗುವ ಜಾಗದಲ್ಲಿ ಸ್ಥಳವನ್ನು ಸೌಂದರ್ಯೀಕರಣಗೊಳಿಸಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಕೆಲವರಿಗೆ ಈ ವಿಚಾರಗಳು ತಿಳಿದಿಲ್ಲ. ಹೀಗಾಗಿ ಅಣೆಕಟ್ಟಿಗೆ ಹೆಚ್ಚುಕಮ್ಮಿ ಆಗಬಹುದು ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅಣೆಕಟ್ಟು ವಿಚಾರದಲ್ಲಿ ನಮಗೂ ಜವಾಬ್ದಾರಿ ಇದೆ. ಈ ಕಾರ್ಯಕ್ರಮ ಕಾವೇರಿ ತಾಯಿಗೆ ಪ್ರಾರ್ಥಿಸುವ ಕಾರ್ಯಕ್ರಮ. ಕೊಡಗು, ಮಂಗಳೂರು, ಮೈಸೂರು, ಮಂಡ್ಯ ಸಂಸ್ಕೃತಿ ಈ ಕಾರ್ಯಕ್ರಮದಲ್ಲಿರಲಿದೆ. ಸುಮಾರು 2 ಸಾವಿರ ಜನರಿಗೆ ನೇರ ಉದ್ಯೋಗ ಸಿಗಲಿದೆ’ ಎಂದು ವಿವರಿಸಿದರು.
‘ಈ ಉದ್ಯೋಗ ಕೇವಲ ಮಂಡ್ಯ ಮೈಸೂರು ಭಾಗದವರಿಗೆ ಸಿಗಬೇಕು ಎಂದು ಸೂಚನೆ ನೀಡಲಾಗಿದೆ. ಸ್ಥಳೀಯ ಪುರೋಹಿತರು, ಕಲಾವಿದರಿಗೆ ಅವಕಾಶ ಕಲ್ಪಿಸಲಾಗುವುದು. ಆದಿ ಚುಂಚನಗಿರಿ ಮಠದಲ್ಲಿ ಪುರೋಹಿತರಿಗೆ ತರಬೇತಿ ನೀಡಲಾಗುವುದು. 300ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದಾರೆ. ಕಾವೇರಿ ಹುಟ್ಟುವ ಕೊಡಗಿನಿಂದ ಕಾವೇರಿ ಸಮುದ್ರಕ್ಕೆ ಸೇರುವವರೆಗೂ ಎಷ್ಟು ಪ್ರದೇಶಗಳಲ್ಲಿ ವಿಭಿನ್ನ ಸಂಸ್ಕೃತಿ ಇದೆಯೋ ಅವುಗಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಒಳಗೊಳ್ಳಬೇಕು’ ಎಂದು ತಿಳಿಸಿದರು.
‘ಈ ಕಾರ್ಯಕ್ರಮಕ್ಕೆ 98 ಕೋಟಿ ಅಗತ್ಯವಿದೆಯೇ?’ ಎಂಬ ಕುಮಾರಸ್ವಾಮಿ ಅವರ ಆಕ್ಷೇಪದ ಬಗ್ಗೆ ಕೇಳಿದಾಗ, ‘ಮೈತ್ರಿ ಸರ್ಕಾರದಲ್ಲಿ ಕೆಆರ್‌ಎಸ್ ಬಳಿ ಡಿಸ್ನಿಲ್ಯಾಂಡ್ ಮಾಡಲು ಅವರು ಸಮ್ಮತಿ ನೀಡಿದ್ದರು’ ಎಂದರು.
ಈ ಕಾರ್ಯಕ್ರಮಕ್ಕೆ ಸಂಸದರ ಒಪ್ಪಿಗೆ ಇದೆಯೇ ಎಂದು ಕೇಳಿದಾಗ, ‘ಒಂದು ಪಕ್ಷದಲ್ಲಿ ಒಬ್ಬ ಬೆಳೆಯುತ್ತಿದ್ದಾನೆ ಎಂದರೆ ಅವನ ವಿರುದ್ಧ ಅಪಸ್ವರ ಬರುತ್ತದೆ. ಅದಕ್ಕೆ ತಲೆಕೆಡಿಸಿಕೊಳ್ಳಬೇಕಿಲ್ಲ’ ಎಂದು ತಿಳಿಸಿದರು.
‘ಎಷ್ಟು ಪ್ರವಾಸಿಗರು ಬರುವ ಅಂದಾಜಿದೆ’ ಎಂಬ ಪ್ರಶ್ನೆಗೆ, ‘ಸದ್ಯಕ್ಕೆ ವಾರಕ್ಕೆ ಮೂರು ದಿನ ಈ ಕಾರ್ಯಕ್ರಮ ಮಾಡಲು ತೀರ್ಮಾನಿಸಿದ್ದೇವೆ. ಇನ್ನು ಕಾರ್ಯಕ್ರಮದ ಬಳಿ 10 ಸಾವಿರ ಜನರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ಈ ಪೈಕಿ ಸುಮಾರು ಶೇ 30ರಷ್ಟು ಪಾವತಿ ಪ್ರವೇಶವಿರುತ್ತದೆ. ಶೇ 70ರಷ್ಟು ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು. ಕಾರ್ಯಕ್ರಮದ ವೇಳೆ ವಾಹನ ನಿಲುಗಡೆಗಾಗಿ 70-80 ಎಕರೆ ಜಾಗವನ್ನು ಮೀಸಲಿಡಲಾಗಿದೆ. ರಸ್ತೆಗಳನ್ನು ಉನ್ನತೀಕರಣಗೊಳಿಸಲಾಗುವುದು’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.