ADVERTISEMENT

ಕೆಪಿಸಿಸಿ ಹುದ್ದೆ ಅಂಗಡಿಯಲ್ಲೂ, ಮಾಧ್ಯಮಗಳ ಮುಂದೆ ಮಾತನಾಡಿದರೂ ಸಿಗಲ್ಲ; ಡಿಕೆಶಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2025, 7:56 IST
Last Updated 16 ಜನವರಿ 2025, 7:56 IST
<div class="paragraphs"><p>ಡಿಕೆಶಿ </p></div>

ಡಿಕೆಶಿ

   

ಬೆಂಗಳೂರು: 'ಕೆಪಿಸಿಸಿ ಹುದ್ದೆ ಅಂಗಡಿಯಲ್ಲೂ ಸಿಗುವುದಿಲ್ಲ, ಮಾಧ್ಯಮಗಳ ಮುಂದೆ ಮಾತನಾಡಿದರೂ ಸಿಗುವುದಿಲ್ಲ" ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ಶಿವಕುಮಾರ್ ಅವರು ಗುರುವಾರ ಉತ್ತರಿಸಿದರು, 'ನಾವು ಮಾಡುವ ಕೆಲಸ, ಶ್ರಮವನ್ನು ಪಕ್ಷದ ನಾಯಕರು ಗುರುತಿಸಿ ಅದಕ್ಕೆ ಸೂಕ್ತ ಹುದ್ದೆ ನೀಡುತ್ತಾರೆ. ಮಾಧ್ಯಮಗಳ ಮುಖಾಂತರ ಯಾರಾದರೂ ಹುದ್ದೆ ಕೇಳುತ್ತಾರೆಯೇ? ಇದನ್ನೆಲ್ಲಾ ಹೊಸದಾಗಿ ಕೇಳುತ್ತಿರುವೆ' ಎಂದರು.

ADVERTISEMENT

'ಪಕ್ಷದ ವಿಚಾರದ ವಿಚಾರವಾಗಿ ಯಾವುದೇ ಬೆಳವಣಿಗೆ ಇದ್ದರೂ ನಾನೇ ಮಾಧ್ಯಮಗೋಷ್ಠಿ ಕರೆದು ಮಾಹಿತಿ ನೀಡುತ್ತೇನೆ. ಈಗ ನಮ್ಮ ಪಕ್ಷ ಸಂಘಟನೆ ಮಾಡಿ, ಪಕ್ಷ ಉಳಿಸಿ, ಬೆಳೆಸುವ ಕೆಲಸ ಮಾಡಬೇಕು. ಪಕ್ಷದಲ್ಲಿ ಎಲ್ಲರೂ ಶಿಸ್ತು ಕಾಪಾಡಬೇಕು ಎಂದು ನಮ್ಮ ಮುಖ್ಯಮಂತ್ರಿ ಹಾಗೂ ಪ್ರಧಾನ ಕಾರ್ಯದರ್ಶಿ ಬುದ್ಧಿವಾದ ಹೇಳಿದ್ದಾರೆ. ಯಾವುದೇ ವಿಚಾರವಾಗಿ ಬಹಿರಂಗವಾಗಿ ಚರ್ಚೆ ಮಾಡದಂತೆ ಸೂಚಿಸಿದ್ದಾರೆ' ಎಂದರು.

ಮಾಧ್ಯಮಗಳ ಮುಂದೆ ಹೇಳಿಕೆಯಿಂದ ಪ್ರಯೋಜನವಿಲ್ಲ: 'ಪಕ್ಷದ ವಿಚಾರ ಮಾಧ್ಯಮಗಳ ಮುಂದೆ ಮಾತನಾಡುವಂಥದಲ್ಲ. ಏನೇ ಇದ್ದರೂ ಎಐಸಿಸಿ ಅಧ್ಯಕ್ಷರು, ರಾಹುಲ್ ಗಾಂಧಿ, ಮುಖ್ಯಮಂತ್ರಿ ಅಥವಾ ನನ್ನ ಬಳಿ ಬಂದು ಮಾತನಾಡಲಿ. ಇದು ಕೇವಲ ಕಾಂಗ್ರೆಸ್ ಮಾತ್ರವಲ್ಲ. ಬಿಜೆಪಿ, ಜೆಡಿಎಸ್, ರೈತ ಸಂಘ ಸೇರಿದಂತೆ ಯಾವುದೇ ಪಕ್ಷವಾದರೂ ಪಕ್ಷದ ವಿಚಾರವನ್ನು ಆಂತರಿಕವಾಗಿ ಚರ್ಚೆ ಮಾಡಬೇಕು ಎಂದು ಹೇಳುತ್ತೇನೆ. ನಾನು ಯಾವುದಾದರೂ ಹುದ್ದೆ ಬಯಸಿದರೆ ನೀವು (ಮಾಧ್ಯಮಗಳು) ಆ ಸ್ಥಾನ ನನಗೆ ಕೊಡಿಸುತ್ತೀರಾ? ಅಥವಾ ಈ ಹುದ್ದೆಗಳು ಅಂಗಡಿಯಲ್ಲಿ ಸಿಗುತ್ತದೆಯೇ? ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರೆ ಯಾವುದೇ ಪ್ರಯೋಜನವಿಲ್ಲ. ಬದಲಿಗೆ ಇದರಿಂದ ವ್ಯತಿರಿಕ್ತ ಪರಿಣಾಮ ಬೀರುತ್ತದೆ' ಎಂದು ಕೇಳಿದರು.

ಯಾರೇ ಇರಲಿ, ಹೋಗಲಿ ಪಕ್ಷ ಇರುತ್ತದೆ: 'ಕಾಂಗ್ರೆಸ್ ಪಕ್ಷವನ್ನು ಕೇವಲ ಡಿ.ಕೆ. ಶಿವಕುಮಾರ್ ಒಬ್ಬನೇ ಅಧಿಕಾರಕ್ಕೆ ತಂದಿಲ್ಲ. ಕಾರ್ಯಕರ್ತರು, ಮತದಾರರು ನಮ್ಮ ಮೇಲೆ ಅಪಾರವಾದ ವಿಶ್ವಾಸ ಇಟ್ಟು ನಮಗೆ ಅಧಿಕಾರ ನೀಡಿದ್ದಾರೆ. ಇದನ್ನು ನಾವು ಉಳಿಸಿಕೊಳ್ಳಬೇಕು, ಉಳಿಸಿಕೊಳ್ಳುತ್ತೇವೆ. ಇದು ಕಾರ್ಯಕರ್ತರ ಹಾಗೂ ಮತದಾರರ ಪಕ್ಷ. ಇದಕ್ಕೆ ತನ್ನದೇ ಆದ ದೊಡ್ಡ ಇತಿಹಾಸವಿದೆ. ಯಾರೇ ಇರಲಿ, ಹೋಗಲಿ ತನ್ನನ್ನು ತಾನು ಉಳಿಸಿಕೊಳ್ಳುವ ಶಕ್ತಿ ಈ ಪಕ್ಷಕ್ಕೆ ಇದೆ ಎಂದರು.

'ಮಹಾತ್ಮಾ ಗಾಂಧಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ಅಧಿಕಾರವನ್ನು ತ್ಯಾಗ ಮಾಡಿದ್ದಾರೆ. ಅಂಬೇಡ್ಕರ್ ಅವರು ಸಂವಿಧಾನ ಕೊಟ್ಟರು ಅವರು ಯಾವ ಅಧಿಕಾರ ಪಡೆದಿದ್ದಾರೆ? ನಾವು ಅವರನ್ನೆಲ್ಲ ಸ್ಮರಿಸಬೇಕು. ಹೀಗಾಗಿ ಮಾಧ್ಯಮಗಳ ಮುಂದೆ ಮಾತನಾಡುವುದಕ್ಕಿಂತ ಪಕ್ಷ ಬಹಳ ಮುಖ್ಯ ಎಂದು ನಾನು ಬಹಳ ನಮ್ರತೆಯಿಂದ ಮನವಿ ಮಾಡುತ್ತೇನೆ' ಎಂದರು.

'ಯಾರಿಗಾದರೂ ಏನೇ ಸಮಸ್ಯೆ ಇದ್ದರೂ ಹೈಕಮಾಂಡ್ ಜತೆ ಚರ್ಚಿಸಿ ಬಗೆಹರಿಸಿಕೊಳ್ಳಿ. ಸಧ್ಯಕ್ಕೆ ನಾವು ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದ ಸಿದ್ಧತೆಯಲ್ಲಿದ್ದು, ಇದರ ಪರಿಶೀಲನೆಗೆ ಸುರ್ಜೆವಾಲ ಅವರು ಶುಕ್ರವಾರ ಬೆಳಗಾವಿಗೆ ಬರಲಿದ್ದಾರೆ. ನಿಮ್ಮ ಪ್ರಶ್ನೆಗಳು ಏನೇ ಇದ್ದರೂ ಅವರನ್ನು ಕೇಳಿ"' ಎಂದು ತಿಳಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಶ್ನೆ ಮಾಡುವುದು ಸರಿಯಲ್ಲ: 'ಪಕ್ಷದ ಸಂಘಟನೆ ಕುಂಠಿತವಾಗಿದೆ, ಪಕ್ಷಕ್ಕೆ ಪೂರ್ಣಪ್ರಮಾಣದ ಅಧ್ಯಕ್ಷರು ಬೇಕು' ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿಕೆ ನೀಡಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿ ಎಂದು ಕೇಳಿದಾಗ, 'ಈ ಬಗ್ಗೆ ಸ್ಪಷ್ಟನೆ ನೀಡಬೇಕಿರುವುದು ನಾನಲ್ಲ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು. ಈ ವಿಚಾರವಾಗಿ ಅವರ ಬಳಿ ಕೇಳಿ. ಅವರ ನಿರ್ಧಾರವನ್ನು ಪ್ರಶ್ನೆ ಮಾಡಲಾಗುತ್ತಿದೆ. ಈ ರೀತಿ ಮಾಡಬಾರದು' ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.