ADVERTISEMENT

ಯತೀಂದ್ರಗೆ ನೋಟಿಸ್‌ ಕೊಡದಷ್ಟು ಡಿಕೆಶಿ ದುರ್ಬಲರೇ?: ಆರ್‌.ಅಶೋಕ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 14:48 IST
Last Updated 25 ಅಕ್ಟೋಬರ್ 2025, 14:48 IST
ಆರ್‌.ಅಶೋಕ
ಆರ್‌.ಅಶೋಕ   

ಬೆಂಗಳೂರು: ‘ಚಲನಚಿತ್ರ ಕಲಾವಿದರಿಗೆ, ಪಕ್ಷದ ಶಾಸಕರಿಗೆ, ಕಾರ್ಯಕರ್ತರಿಗೆ ಧಮಕಿ ಹಾಕುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ನೋಟಿಸ್‌ ಕೊಡುವಷ್ಟು ಧೈರ್ಯ ಇಲ್ಲವಾ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಪ್ರಶ್ನಿಸಿದ್ದಾರೆ.

ಈ ಕುರಿತು ‘ಎಕ್ಸ್‌’ ಮಾಡಿರುವ ಅವರು, ‘ಚಲನಚಿತ್ರ ಕಲಾವಿದರಿಗೆ ನಟ್ಟುಬೋಲ್ಟ್‌ ಟೈಟ್‌ ಮಾಡ್ತೀನಿ ಅಂದಿದ್ದರು. ಅಧಿಕಾರ ಹಂಚಿಕೆ ಹಾಗೂ ಮುಖ್ಯಮಂತ್ರಿ ಬದಲಾವಣೆ ಕುರಿತು ಹೇಳಿಕೆ ನೀಡಿದ್ದ ಶಾಸಕರಿಗೆ ತಗ್ಗಿ-ಬಗ್ಗಿ ನಡೀಬೇಕು ಎಂದು ತಾಕೀತು ಮಾಡಿದ್ದರು. ನಿಮ್ಮ ಛತ್ರಿ ಬುದ್ಧಿ ಗೊತ್ತು ಎಂದು ಕಾರ್ಯಕರ್ತರಿಗೆ ಆವಾಜ್‌ ಹಾಕಿದ್ದರು. ಆದರೆ, ಕೆಪಿಸಿಸಿ ಅಧ್ಯಕ್ಷರಾಗಿ ಯತೀಂದ್ರ ಅವರಿಗೆ ಒಂದು ನೋಟಿಸ್‌ ಕೊಡುವ ಧೈರ್ಯ ಇಲ್ಲವಾಗಿದೆ’ ಎಂದು ಟೀಕಿಸಿದ್ದಾರೆ.

‘ಎಲ್ಲದಕ್ಕೂ ದೆಹಲಿ ಹೈಕಮಾಂಡ್‌ ಕಡೆಗೆ ನೋಡುವ ನಿಮ್ಮಂಥ ದುರ್ಬಲ ನಾಯಕರು ರಾಜ್ಯದ ಮುಖ್ಯಮಂತ್ರಿಯಾದರೆ ಕನ್ನಡಿಗರಿಗೆ ಏನು ಪ್ರಯೋಜನ? ಒಂದು ವೇಳೆ ತಾವು ಮುಖ್ಯಮಂತ್ರಿಯಾದರೂ ಸಿದ್ದರಾಮಯ್ಯ ಅವರೇ ಸೂಪರ್‌ ಸಿ.ಎಂ ಆಗಿ ಉಳಿಯುವುದರಲ್ಲಿ ಯಾವುದೇ ಅನುಮಾನ ಇಲ್ಲ’ ಎಂದು ಹೇಳಿದ್ದಾರೆ.

ADVERTISEMENT