ADVERTISEMENT

ಬಿಜೆಪಿಯವರು ಟೀಕೆ ಬಿಟ್ಟು ರಚನಾತ್ಮಕ ಸಲಹೆ ನೀಡಲಿ: ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2024, 23:30 IST
Last Updated 9 ಮಾರ್ಚ್ 2024, 23:30 IST
<div class="paragraphs"><p>ಡಿ.ಕೆ. ಶಿವಕುಮಾರ್</p></div>

ಡಿ.ಕೆ. ಶಿವಕುಮಾರ್

   

ಬೆಂಗಳೂರು: ‘ಕುಡಿಯುವ ನೀರಿನ ಅಭಾವ ಕುರಿತಂತೆ ವಿರೋಧ ಪಕ್ಷಗಳು ರಾಜಕೀಯ ಟೀಕೆ ಬಿಟ್ಟು ರಚನಾತ್ಮಕ ಸಲಹೆ ನೀಡಿದರೆ ಸ್ವೀಕರಿಸಲು ಸಿದ್ಧ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಸರ್ಕಾರ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಖಾಸಗಿ ಟ್ಯಾಂಕರ್‌ಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಮಾಫಿಯಾ ತಡೆಗಟ್ಟಿದೆ’ ಎಂದರು.

ADVERTISEMENT

‘ನಗರದಲ್ಲಿ ಶೇ 50ರಷ್ಟು ಕೊಳವೆಬಾವಿಗಳು ಬರಿದಾಗಿವೆ. ಸಾವಿರಾರು ಟ್ಯಾಂಕರ್‌ಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಜಲ ಮೂಲಗಳಿರುವ ಕಡೆಗಳಿಂದ ನೀರು ಪೂರೈಸಲು ನಿರ್ಧರಿಸಲಾಗಿದೆ. ದೂರದಿಂದ ನೀರು ಪೂರೈಸಬೇಕಾದ ಕಾರಣ ಟ್ಯಾಂಕರ್ ನೀರಿನ ದರ ನಿಗದಿಪಡಿಸಲು ಅಧಿಕಾರಿಗಳಿಗೆ ತಿಳಿಸಿದ್ದೇವೆ. ಖಾಲಿ ಇರುವ ದೊಡ್ಡ ಹಾಲಿನ ಟ್ಯಾಂಕರ್‌ಗಳನ್ನೂ ನೀರು ಪೂರೈಸಲು ಬಳಸಲಾಗುವುದು’ ಎಂದರು.

‘ಕೊಳವೆಬಾವಿಗಳು ಬತ್ತಿದಾಗ ಹಾಹಾಕಾರ ಉದ್ಭವಿಸುತ್ತದೆ. ಈ ಪರಿಸ್ಥಿತಿಯಲ್ಲಿ ಕುಡಿಯುವ ನೀರನ್ನು ವಾಹನ ತೊಳೆಯಲು ಮತ್ತು ಇತರ ಬಳಕೆಗೆ ಬಳಸದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದೇವೆ. ನೀರಿನ ಬೆಲೆ ಎಲ್ಲರಿಗೂ ಅರ್ಥವಾಗಬೇಕು’ ಎಂದರು.

‘ಖಾಸಗಿ ಟ್ಯಾಂಕರ್‌ಗಳಿಗೆ ಸಿಗುವ ನೀರು, ಸರ್ಕಾರಕ್ಕೆ ಯಾಕೆ ಸಿಗುತ್ತಿಲ್ಲ?’ ಎಂದು ಸಾರ್ವಜನಿಕವಾಗಿ ಚರ್ಚೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಖಾಸಗಿ ಟ್ಯಾಂಕರ್‌ನವರು ಖಾಸಗಿ ಕೊಳವೆಬಾವಿಗಳಿಂದ ನೀರು ಪೂರೈಸುತ್ತಾರೆ. ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಸರ್ಕಾರ ನೀರು ಪೂರೈಸುತ್ತಿದೆ. ದುರಸ್ತಿಯಲ್ಲಿರುವ ಘಟಕಗಳನ್ನು ರಿಪೇರಿ ಮಾಡುತ್ತಿದ್ದೇವೆ. ಇನ್ನೂ3–4 ತಿಂಗಳು ಈ ಸಮಸ್ಯೆ ಇರಲಿದೆ’ ಎಂದರು.

ನೋಡಲ್ ಅಧಿಕಾರಿ ನೇಮಕ: ‘ಬೆಂಗಳೂರು ಗ್ರಾಮಾಂತರ ಭಾಗದ ವಾರ್ಡ್‌ಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು, ಬೇರೆ ಭಾಗಗಳಲ್ಲಿ ಯಾಕೆ ನೇಮಿಸಿಲ್ಲ’ ಎಂದು ಕೇಳಿದಾಗ, ‘ಬೆಂಗಳೂರು ಗ್ರಾಮಾಂತರ ಭಾಗ ಸಂಪೂರ್ಣವಾಗಿ ಕೊಳವೆ ಬಾವಿಗಳ ಮೇಲೆ ಅವಲಂಬಿತವಾಗಿದ್ದು, ಹೆಚ್ಚು ಸಂಖ್ಯೆಯಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಹೀಗಾಗಿ, ಅಲ್ಲಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಬೆಂಗಳೂರು ನಗರ ಪ್ರದೇಶ ಕಾವೇರಿ ನೀರನ್ನು ಅವಲಂಬಿಸಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.