ADVERTISEMENT

ಹರಕಲು ಬಾಯಿ ಮುಚ್ಚಿಕೊಂಡಿರುವಂತೆ ಈಶ್ವರಪ್ಪಗೆ ನಡ್ಡಾ ಬೈದಿದ್ದಾರೆ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2022, 12:28 IST
Last Updated 22 ಫೆಬ್ರುವರಿ 2022, 12:28 IST
ಡಿ.ಕೆ.ಶಿವಕುಮಾರ್‌
ಡಿ.ಕೆ.ಶಿವಕುಮಾರ್‌    

ಮಂಡ್ಯ: ‘ಹರಕಲು ಬಾಯಿ ಈಶ್ವರಪ್ಪ ನೀಡಿದ್ದ ಕೇಸರಿ ಧ್ವಜ ವಿರುದ್ಧ ನಾವು 5 ದಿನ ವಿಧಾನಸೌಧದಲ್ಲಿ ಧರಣಿ ನಡೆಸಿದೆವು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಈಶ್ವರಪ್ಪ ಅವರಿಗೆ ಕರೆ ಮಾಡಿ ಬೈದಿದ್ದು ಬಾಯಿಮುಚ್ಚಿಕೊಂಡು ಸುಮ್ಮನಿರುವಂತೆ ಎಚ್ಚರಿಕೆ ನೀಡಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಂಗಳವಾರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಕೇಸರಿ ಧ್ವಜ ಅಲ್ಲ, ನಮಗೆ ರಾಷ್ಟ್ರಧ್ವಜ ಮುಖ್ಯ, ಬಿಜೆಪಿ ಮರ್ಯಾದೆ ತೆಗೆಯಬೇಡ ಎಂದು ನಡ್ಡಾ ಬೈದಿದ್ದಾರೆ’ ಎಂದರು.

‘ಕಾಂಗ್ರೆಸ್‌ ಪಕ್ಷ ಈ ದೇಶಕ್ಕೆ ಸಾತಂತ್ರ್ಯ ತಂದುಕೊಟ್ಟಿದೆ, ರಾಷ್ಟ್ರಧ್ವಜಸಂವಿಧಾನ ಕೊಟ್ಟಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಬಣ್ಣವನ್ನು ಬಿಜೆಪಿಯವರು ಹಾಕಿಕೊಳ್ಳಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

ADVERTISEMENT

‘ಶಿವಮೊಗ್ಗ ಹಿಂದೂ ಕಾರ್ಯಕಾರ್ತನ ಹತ್ಯೆವಿಚಾರದಲ್ಲಿ ಈಶ್ವರಪ್ಪ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ತಾನು ಮಾತನಾಡಿದ್ದೇ ಸರಿ ಎನ್ನುತ್ತಿದ್ದಾರೆ. ಒಮ್ಮೆ ಡಿ.ಕೆ.ಶಿವಕುಮಾರ್‌ನಿಂದಲೇ ಕೊಲೆ ಆಯಿತು ಎನ್ನುತ್ತಾರೆ. ಮತ್ತೊಮ್ಮೆ ಹೊರಗಿನವರ ಸಂಚು ಎನ್ನುತ್ತಾರೆ. ಗಂಟೆಗೊಂದು ಹೇಳಿಕೆ ಕೊಡುತ್ತಿದ್ದಾರೆ. ಹತ್ಯೆಗೆ ಹಳೇ ವೈಷಮ್ಯ ಕಾರಣ ಎಂದು ಅಲ್ಲಿಯ ಉಸ್ತುವಾರಿ ಸಚಿವರು, ಅಧಿಕಾರಿಗಳು ಹೇಳಿದ್ದಾರೆ. ಆ ಬಗ್ಗೆ ಸಮಗ್ರ ತನಿಖೆ ನಡೆಯಬೇಕು’ ಎಂದು ಒತ್ತಾಯಿಸಿದರು.

‘ಶಿವಮೊಗ್ಗದಲ್ಲಿ ಬಿ.ಎಸ್‌.ಯಡಿಯೂರಪ್ಪ ಮಾಡಿರುವ ಕೆಲಸಗಳಿಗೆ ಈಶ್ವರಪ್ಪ ಕಳಂಕ ತಂದಿದ್ದಾರೆ. ಮುಂದಿನ ಶಿವಮೊಗ್ಗದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಲಿದೆ. ಶಾಂತಿ ಇಲ್ಲದ ಕಡೆ ವ್ಯಾಪಾರ, ವಹಿವಾಟು ನಡೆಸಲು, ಬಂಡವಾಳ ಹೂಡಿಕೆ ಮಾಡಲು ಯಾರೂ ಮುಂದೆ ಬರುವುದಿಲ್ಲ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿದ್ದು ಜನರಿಗೆ ರಕ್ಷಣೆ ನೀಡಲು ಸರ್ಕಾರ, ಸಚಿವರು ಹಾಗೂ ಪೊಲೀಸರು ವಿಫಲವಾಗಿದ್ದಾರೆ’ ಎಂದು ಆರೋಪಿಸಿದರು.

****

ಕಾಂಗ್ರೆಸ್‌ಗೆ ಬರುವವರ ಪಟ್ಟಿ ದೊಡ್ಡದಿದೆ

‘ಜೆಡಿಎಸ್ ತ್ಯಜಿಸಿ ಕಾಂಗ್ರೆಸ್‌ಗೆ ಬರುವವರ ಪಟ್ಟಿ ಸಾಕಷ್ಟು ದೊಡ್ಡದಿದೆ. ಯಾರನ್ನೂ ಬನ್ನಿ ಎಂದು ನಾನು ಕರೆದಿರಲಿಲ್ಲ, ಸ್ವಯಿಚ್ಛೆಯಿಂದ ಬರುತ್ತಿದ್ದಾರೆ. ಆದರೆ ಜೆಎಎಸ್‌ನವರು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅವರು ಮಾತನಾಡಿಕೊಂಡು ಸಮಾಧಾನ ಮಾಡಿಕೊಳ್ಳಲಿ’ ಎಂದು ವ್ಯಂಗ್ಯವಾಡಿದರು.

‘ಗುಬ್ಬಿ ಶ್ರೀನಿವಾಸ್‌, ಜಿ.ಟಿ.ದೇವೇಗೌಡ, ತಿಪಟೂರಿನ ಜೆಡಿಎಸ್‌ ಮುಖಂಡರು ಸೇರಿ ಹಲವರು ಕಾಂಗ್ರೆಸ್‌ಗೆ ಬರುವುದಾಗಿ ತಿಳಿಸಿದ್ದಾರೆ. ಹಲವು ಶಾಸಕರು ಕಾಂಗ್ರೆಸ್‌ ಸೇರಲು ಮುಂದಾಗಿದ್ದಾರೆ. ಅವರ ಹೆಸರುಗಳನ್ನು ಈಗ ಹೇಳುವುದಿಲ್ಲ, ಮುಂದೆ ಹೇಳುತ್ತೇನೆ. ಬಿಜೆಪಿ ಮುಖಂಡರೂ ಕಾಂಗ್ರೆಸ್‌ಗೆ ಬರುತ್ತಿದ್ದಾರೆ. ಬಿಜೆಪಿಯಿಂದ ಕಾಂಗ್ರೆಸ್‌ ಸೇರಿದ್ದ ಯುವ ಮುಖಂಡನೊಬ್ಬ ಪಕ್ಷಕ್ಕೆ ರಾಜ್ಯದಲ್ಲೇ ಅತೀ ಹೆಚ್ಚು ಸದಸ್ಯತ್ವ ಮಾಡಿಸಿದ್ದಾನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.