ADVERTISEMENT

ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ತಡೆ ಆದೇಶ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 15:42 IST
Last Updated 2 ಜೂನ್ 2023, 15:42 IST
   

ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ನೀಡಲಾಗಿರುವ ಮಧ್ಯಂತರ ತಡೆ ಆದೇಶವನ್ನು ಹೈಕೋರ್ಟ್ ಪುನಃ ವಿಸ್ತರಿಸಿದೆ.

ಸಿಬಿಐ ತನಿಖೆ ರದ್ದು ಕೋರಿ ಡಿ.ಕೆ. ಶಿವಕುಮಾರ್ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನ್ಯಾಯಪೀಠವು, ’ಈಗಾಗಲೇ ಪ್ರಕರಣದ ಭಾಗಶಃ ವಿಚಾರಣೆಯನ್ನು ಇದೇ ಹೈಕೋರ್ಟ್‌ನ ಮತ್ತೊಂದು ಏಕಸದಸ್ಯ ನ್ಯಾಯಪೀಠ ನಡೆಸಿದೆ. ಈಗ ಅದೇ ರಿಟ್‌ ಅರ್ಜಿ ಈ ನ್ಯಾಯಪೀಠದ ಮುಂದೆ ಬಂದಿದೆ. ಹೀಗಾಗಿ, ಯಾವ ನ್ಯಾಯಪೀಠ ಈ ಅರ್ಜಿಯ ವಿಚಾರಣೆಯನ್ನು ಮುಂದುವರಿಸಬೇಕು ಎಂಬ ಕಾನೂನು ಜಿಜ್ಞಾಸೆ ಇದೆ. ಈ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳ ಸೂಚನೆಯ ಅಗತ್ಯವಿದೆ. ಆದ್ದರಿಂದ, ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದೆಯೇ ಮಂಡಿಸಿ ವಿವರಣೆ ಪಡೆಯಬೇಕಿದೆ. ಹಾಗಾಗಿ, ಅವರಿಂದ ಆದೇಶ ಬಂದ ನಂತರ ಅರ್ಜಿಯನ್ನು ಯಾವ ಪೀಠ ವಿಚಾರಣೆ ನಡೆಸಬೇಕು ಎಂಬುದು ನಿರ್ಧಾರವಾಗಲಿ‘ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಮುಂದಿನ ವಿಚಾರಣೆವರೆಗೆ ಸಿಬಿಐ ತನಿಖೆಗೆ ನೀಡಿರುವ ತಡೆ ಆದೇಶವನ್ನು ವಿಸ್ತರಿಸಿ ಆದೇಶಿಸಿತು.

ADVERTISEMENT

ಪ್ರಕರಣವೇನು?: ಡಿ.ಕೆ. ಶಿವಕುಮಾರ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ವಿವಿಧ ಕಲಂಗಳ ಅಡಿಯಲ್ಲಿ ಸಿಬಿಐ 2020ರ ಅಕ್ಟೋಬರ್ 3ರಂದು ಪ್ರಕರಣ ದಾಖಲಿಸಿತ್ತು. ಇದನ್ನು ಪ್ರಶ್ನಿಸಿದ್ದ ಶಿವಕುಮಾರ್, ‘ಸಿಬಿಐ ದಾಖಲಿಸಿರುವ ಎಫ್‌ಐಆರ್ ಕಾನೂನು ಬಾಹಿರವಾಗಿದ್ದು, ತನಿಖೆ ರದ್ದುಪಡಿಸಬೇಕು‘ ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ರಿಟ್‌ ಅರ್ಜಿಯ ಭಾಗಶಃ ವಿಚಾರಣೆ ನಡೆಸಿದ್ದ  ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸಿಬಿಐ ತನಿಖೆಗೆ 2023ರ ಫೆಬ್ರುವರಿ 10ರಂದು ತಡೆ ನೀಡಿತ್ತು. ಅಂತೆಯೇ, ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿದ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಡಿಕೆಶಿ ಸಲ್ಲಿಸಿದ್ದ ಮತ್ತೊಂದು ಅರ್ಜಿಯನ್ನು ನ್ಯಾಯಮೂರ್ತಿ ಕೆ. ನಟರಾಜನ್‌ ಅವರಿದ್ದ ಏಕಸದಸ್ಯ ನ್ಯಾಯಪೀಠವು ಇತ್ತೀಚೆಗಷ್ಟೇ ವಜಾಗೊಳಿಸಿ ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.