ADVERTISEMENT

ಡಿ.ಕೆ. ಸುರೇಶ್‌ ಬೆಂಬಲಿಗರ ಜಾಮೀನು ಅರ್ಜಿ ವಜಾ

ಹಳೇ ನೋಟುಗಳನ್ನು ಬದಲಾವಣೆ ಮಾಡಿದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 29 ಜೂನ್ 2018, 17:16 IST
Last Updated 29 ಜೂನ್ 2018, 17:16 IST

ಬೆಂಗಳೂರು: ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ, ₹ 10 ಲಕ್ಷ ಬದಲಾವಣೆ ಮಾಡಿದ ಪ್ರಕರಣದಲ್ಲಿ ಸಂಸದ ಡಿ.ಕೆ. ಸುರೇಶ್‌ ಅವರ ಆಪ್ತರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ ವಜಾ ಮಾಡಿದೆ.

ಈ ಪ್ರಕರಣ ಕುರಿತು ಸಿಬಿಐ ತನಿಖೆ ನಡೆಸುತ್ತಿದ್ದು, ಇದರಿಂದಾಗಿ ಸಂಸದರ ಬೆಂಬಲಿಗರಿಗೆ ಸಂಕಷ್ಟ ಎದುರಾಗಿದೆ. ಹಳೇ ನೋಟುಗಳನ್ನು ಬದಲಾಯಿಸಿದ ಪ್ರಕರಣದಲ್ಲಿ ಈಗಾಗಲೇ ರಾಮನಗರದ ಕಾರ್ಪೋರೇಷನ್‌ ಬ್ಯಾಂಕ್‌ ವ್ಯವಸ್ಥಾಪಕ ಪ್ರಕಾಶ್‌ ಅವರಿಗೆ ನಿರೀಕ್ಷಣಾ ಜಾಮೀನು ದೊರೆತಿದೆ.

ಡಿ.ಕೆ. ಸುರೇಶ್ ಅವರ ಆಪ್ತ ಸಹಾಯಕ ಬಿ.ಪದ್ಮನಾಭಯ್ಯ, ಡಿ.ಕೆ.ಶಿವಕುಮಾರ್ ಅವರ ಮಾಜಿ ಆಪ್ತ ಸಹಾಯಕ ಶೇಷಗಿರಿ, ಎಸ್.ಪದ್ಮರೇಖಾ, ಶಿವಾನಂದ್, ಕೆ.ನಂಜಪ್ಪ ಮತ್ತು ತಿಮ್ಮಯ್ಯ ಸೇರಿದಂತೆ ಎಂಟು ಮಂದಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿಶೇಷ ಸಿಬಿಐ ನ್ಯಾಯಾಧೀಶರಾದ ಎಸ್‌.ಎಚ್‌. ಪುಷ್ಪಾಂಜಲಿ ದೇವಿ ವಜಾ ಮಾಡಿದ್ದಾರೆ.

ADVERTISEMENT

ನಕಲಿ ದಾಖಲೆಗಳನ್ನು ಸೃಷ್ಟಿಸಿ ₹ 500, 1000 ಮುಖಬೆಲೆಯ ನೋಟುಗಳನ್ನು ಬದಲಾಯಿಸಿದ ಪ್ರಕರಣ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ. ರಾಮನಗರದ ಕಾರ್ಪೊರೇಷನ್ ಬ್ಯಾಂಕ್‌ನಲ್ಲಿ ಈ ಅಕ್ರಮ ನಡೆದಿತ್ತು. ಡಿ.ಕೆ.ಶಿವಕುಮಾರ್ ಮತ್ತು ಸುರೇಶ್ ಸುದ್ದಿಗೋಷ್ಟಿ ನಡೆಸಿ ಆರೋಪ ನಿರಾಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.