ADVERTISEMENT

ಮಾತು ತಿರುಚುವುದರಲ್ಲಿ ರವಿ ನಿಪುಣ: ಡಿ.ಕೆ. ಸುರೇಶ್‌

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2024, 15:51 IST
Last Updated 22 ಡಿಸೆಂಬರ್ 2024, 15:51 IST
ಡಿ.ಕೆ. ಸುರೇಶ್
ಡಿ.ಕೆ. ಸುರೇಶ್   

ಬೆಂಗಳೂರು: ‘ಆರೋಪ ಮಾಡುವುದರಲ್ಲಿ, ಮಾತು ತಿರುಚುವುದರಲ್ಲಿ ಸಿ.ಟಿ. ರವಿ ನಿಪುಣ’ ಎಂದು ಕಾಂಗ್ರೆಸ್ ಮಾಜಿ ಸಂಸದ ಡಿ.ಕೆ. ಸುರೇಶ್‌ ಹೇಳಿದರು.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ತಾನು ಮಾಡಿರುವ ತಪ್ಪಿಗೆ ಅವರು ರಾಜ್ಯದ ಮಹಿಳೆಯರಲ್ಲಿ ಕ್ಷಮೆ ಕೇಳುವುದು ಒಳಿತು’ ಎಂದು ಅಭಿಪ್ರಾಯಪಟ್ಟರು.

‘ಬಿಜೆಪಿಯ ಅನೇಕ ನಾಯಕರು ಮಹಿಳೆಯರ ಬಗ್ಗೆ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ, ಅವರ ಕುಟುಂಬದಲ್ಲಿನ ಹೆಣ್ಣು ಮಕ್ಕಳಿಗೆ, ತಾಯಿಗೆ, ಮಡದಿಗೂ ಗೌರವ ನೀಡುವುದಿಲ್ಲ ಎಂದೆನಿಸುತ್ತಿದೆ. ಸಂಸ್ಕೃತಿ ಬಗ್ಗೆ ಪಾಠ ಮಾಡುವ ಆರೆಸ್ಸೆಸ್‌ನವರು ಈಗಲಾದರೂ ಬಿಜೆಪಿ ನಾಯಕರ ಮಾತುಗಳಿಗೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.

ADVERTISEMENT

ಎಸ್‌ಪಿಜಿ ಭದ್ರತೆ ತೆಗೆದುಕೊಳ್ಳಲಿ:

‘ನನಗೇನಾದರೂ ಆದರೆ ಡಿ.ಕೆ. ಶಿವಕುಮಾರ್ ಹಾಗೂ ಲಕ್ಷ್ಮೀ ಹೆಬ್ಬಾಳಕರ ಅವರೇ ಕಾರಣ’ ಎಂಬ ಸಿ.ಟಿ. ರವಿ ಹೇಳಿಕೆ ಬಗ್ಗೆ ಕೇಳಿದಾಗ, ‘ಸಿ.ಟಿ. ರವಿ ಕೆಲವು ವಿಚಾರಗಳಲ್ಲಿ ಪ್ರಚಂಡರು. ದೆಹಲಿಯಲ್ಲಿ ಅವರದೇ ಸರ್ಕಾರ ಇದೆ. ರಾಜ್ಯ ಪೊಲೀಸರ ಮೇಲೆ ನಂಬಿಕೆ ಇಲ್ಲವಾದರೆ ಕೇಂದ್ರ ಸರ್ಕಾರದಿಂದ ಎಸ್‌ಪಿಜಿ ಭದ್ರತೆ ಪಡೆಯಲಿ ಅಥವಾ ರಾಜ್ಯ ಸರ್ಕಾರದಿಂದ ಭದ್ರತೆ ಪಡೆದು ಹಿಂದೆಯೊಂದು ಮುಂದೆ ಒಂದು ಭದ್ರತಾ ವ್ಯಾನ್ ಹಾಕಿಕೊಂಡು ಓಡಾಡಲಿ’ ಎಂದರು.

‘ಹತ್ತು ವರ್ಷಗಳಿಂದ ಮಹಿಳೆಯರ ಮೇಲೆ ಬಿಜೆಪಿ ನಾಯಕರ ಉಪಟಳಗಳು ಹೆಚ್ಚಾಗಿವೆ. ಇದೆಲ್ಲವನ್ನು ನೋಡಿದಾಗ ಮೌಲ್ಯಗಳು ಕುಸಿಯುತ್ತಿವೆ, ಓಲೈಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಜನಪ್ರತಿನಿಧಿಗಳು ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ. ಹೀಗಾಗಿ ಎಲ್ಲರೂ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಒತ್ತಾಯಿಸುತ್ತೇನೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.