ADVERTISEMENT

ಪಂಚಮಸಾಲಿಗಳನ್ನ 2ಎಗೆ ಸೇರಿಸಿದರೆ ಹೋರಾಟ: ಸಿ.ಎಸ್. ದ್ವಾರಕನಾಥ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 16:36 IST
Last Updated 23 ಅಕ್ಟೋಬರ್ 2021, 16:36 IST
ಸಭೆಯಲ್ಲಿ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ, ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಎಂ.ಸಿ. ವೇಣುಗೋಪಾಲ್ ಮತ್ತು ಸಿ.ಎಸ್. ದ್ವಾರಕನಾಥ್ ಭಾಗವಹಿಸಿದ್ದರು
ಸಭೆಯಲ್ಲಿ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ, ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಎಂ.ಸಿ. ವೇಣುಗೋಪಾಲ್ ಮತ್ತು ಸಿ.ಎಸ್. ದ್ವಾರಕನಾಥ್ ಭಾಗವಹಿಸಿದ್ದರು   

ಬೆಂಗಳೂರು: ‘ಹಿಂದುಳಿದ ವರ್ಗಗಳ ಪ್ರವರ್ಗ 2 (ಎ)ಗೆ ಸೇರಿಸಬೇಕೆಂಬ ವೀರಶೈವ ಪಂಚಮಸಾಲಿ ಸಮುದಾಯದ ಒತ್ತಡಕ್ಕೆ ಮಣಿದರೆ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಾಗುತ್ತದೆ’ ಎಂದು ಕಾಂಗ್ರೆಸ್ ಮುಖಂಡ ಸಿ.ಎಸ್. ದ್ವಾರಕನಾಥ್ ಎಚ್ಚರಿಸಿದರು.

ರಾಜ್ಯದ ಅತಿ ಹಿಂದುಳಿದ ಸಮುದಾಯಗಳ ಮಠಾಧೀಶರನ್ನು ಒಳಗೊಂಡ ಸಭೆಯಲ್ಲಿ ಮಾತನಾಡಿದ ಅವರು, ‘ವೀರಶೈವ ಪಂಚಮಸಾಲಿ ಸಮಾಜದ ಮಠಾಧೀಶರು ಈ ಹೋರಾಟದ ಮುಂಚೂಣಿಯಲ್ಲಿ ವಹಿಸಿರುವುದು ದುರಾದೃಷ್ಟಕರ. ಅತೀ ಹಿಂದುಳಿದ ಸಮುದಾಯಗಳು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ದುರ್ಬಲವಾಗಿವೆ ಎಂದು ಭಾವಿಸಿ ಸರ್ಕಾರ ಈ ಒತ್ತಡಕ್ಕೆ ಮಣಿದರೆ ಸುಮ್ಮನಿರುವುದಿಲ್ಲ’ ಎಂದರು.

‘ಎಲ್ಲಾ ರೀತಿಯಲ್ಲೂ ಬಲಿಷ್ಠವಾಗಿರುವ ಪಂಚಮಸಾಲಿ ಸಮುದಾಯದಲ್ಲಿ ಭೂಮಾಲೀಕರು, ಕೈಗಾರಿಕೋದ್ಯಮಿಗಳು, ಪ್ರಬಲ ರಾಜಕಾರಣಿಗಳಿದ್ದಾರೆ. ಕುಶಲಕರ್ಮಿ, ಕುಲ ಕಸುಬುಗಳನ್ನು ನಂಬಿ ಬದುಕುತ್ತಿರುವ ಅತೀ ಹಿಂದುಳಿದ ಸಮುದಾಯಗಳ ಜತೆ ಪ್ರಬಲ ಸಮುದಾಯವನ್ನು ಸೇರಿಸುವುದು ದೊಡ್ಡ ಅನ್ಯಾಯ’ ಎಂದರು.

ADVERTISEMENT

ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಂ.ಸಿ. ವೇಣುಗೋಪಾಲ್, ‘ತಮಗೆ ಎದುರಾಗುತ್ತಿರುವ ಈ ಅಪಾಯವನ್ನು ಮನಗಂಡು ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ಹೋರಾಟಗಳನ್ನು ಹಮ್ಮಿಕೊಳ್ಳಲಾಗಿದೆ. ಹೈಕೋರ್ಟ್‌ಗೂ ಮೊರೆ ಹೋಗಿದ್ದೇವೆ’ ಎಂದು ಹೇಳಿದರು.

‘ಅವಕಾಶ ವಂಚಿತ ಸಮುದಾಯಗಳನ್ನು ಪ್ರತಿನಿಧಿಸುವುದು ಈ ಜಾಗೃತ ವೇದಿಕೆಯ ಉದ್ದೇಶ. ಒಂದನೇ ಪ್ರವರ್ಗದಲ್ಲಿರುವ 95 ಜಾತಿಗಳು, ಎರಡನೇ ಪ್ರವರ್ಗದಲ್ಲಿರುವ 102 ಸಮುದಾಯಗಳು ಅತ್ಯಂತ ಅನ್ಯಾಯಕ್ಕೆ ಒಳಗಾಗಿವೆ. ಪಂಚಮಸಾಲಿಗಳ ಬೇಡಿಕೆ ಪರಿಶೀಲಿಸಲು ನ್ಯಾಯಮೂರ್ತಿ ಸುಭಾಷ್‌ ಅಡಿ ನೇತೃತ್ವದಲ್ಲಿ ಸಮಿತಿ ರಚಿಸಿರುವುದು ಅವೈಜ್ಞಾನಿಕ ಮತ್ತು ಅಸಂವಿಧಾನಿಕ’ ಎಂದರು.

ಜಾಗೃತ ವೇದಿಕೆಯ ಉಪಾಧ್ಯಕ್ಷ ರಮೇಶ್‌, ಕೆ.ಎಸ್‌. ದುಶ್ಯಂತ್‌, ನರಸಿಂಹಮೂರ್ತಿ, ಎಚ್‌.ಪಿ. ರಾಜಶೇಖರ್, ಎಸ್‌.ಆರ್‌. ಯಲ್ಲಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.