ADVERTISEMENT

ಇಂದು ಮುಷ್ಕರ: ವೈದ್ಯ ಸೇವೆ ಸ್ಥಗಿತ, ಏನಿದೆ, ಏನಿಲ್ಲ?

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 19:53 IST
Last Updated 30 ಜುಲೈ 2019, 19:53 IST
   

ಬೆಂಗಳೂರು: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಮಸೂದೆ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ದೇಶದಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಬುಧವಾರ ವೈದ್ಯಕೀಯ ಸೇವೆ ವ್ಯತ್ಯಯವಾಗುವ ಸಾಧ್ಯತೆಯಿದೆ.

ಎನ್‌ಎಂಸಿ ಮಸೂದೆಗೆ ಆರಂಭ ದಿಂದಲೂ ವಿರೋಧ ವ್ಯಕ್ತಪಡಿಸಿದ್ದ ಐಎಂಎ, ಅದನ್ನು ಕೈಬಿಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು. ಆದರೆ, ಸೋಮವಾರ ಈ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ನೀಡಲಾಗಿದೆ.

ಇದನ್ನು ವಿರೋಧಿಸಿ, 24ಗಂಟೆ ಮುಷ್ಕರಕ್ಕೆ ಐಎಂಎ ಕರೆ ನೀಡಿದ್ದು, ಬುಧವಾರ ಬೆಳಿಗ್ಗೆ 6 ಗಂಟೆಯಿಂದ ಗುರುವಾರ ಬೆಳಿಗ್ಗೆ 6 ಗಂಟೆವರೆಗೆ ಖಾಸಗಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ ಗಳಲ್ಲಿ ತುರ್ತು ಚಿಕಿತ್ಸೆ ಮಾತ್ರ ಲಭ್ಯವಾಗಲಿದೆ. ಒಪಿಡಿ ಸೇರಿದಂತೆ ಉಳಿದ ಸೇವೆಗಳು ಸ್ಥಗಿತವಾಗಲಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಎಂದಿನಂತೆ ಸೇವೆ ಮುಂದುವರೆಯಲಿದೆ. ಔಷಧ ಅಂಗಡಿಗಳು ಕೂಡಾ ತೆರೆದಿರುತ್ತವೆ. ರಾಜ್ಯದಲ್ಲಿ 25 ಸಾವಿರ ವೈದ್ಯರು ಐಎಂಎ ಸದಸ್ಯರಾಗಿದ್ದು, ಆಸ್ಪತ್ರೆಗಳ ಮುಂದೆ ಮುಷ್ಕರ ನಡೆಸಲಿದ್ದಾರೆ. ಇದರಿಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ದಟ್ಟಣೆ ಹೆಚ್ಚಿ, ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.

ADVERTISEMENT

ಖಾಸಗಿ ಆಸ್ಪತ್ರೆ ವೈದ್ಯರ ಪ್ರತಿಭಟನೆ ಹಿನ್ನೆಲೆಯಲ್ಲಿ ರೋಗಿಗಳಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕೈಗೊಂಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದೆ.

‘ಎನ್‌ಎಂಸಿ ಮಸೂದೆ ಬಡವರ ವಿರೋಧಿಯಾಗಿದ್ದು, ವೈದ್ಯಕೀಯ ಶಿಕ್ಷಣ ಪಡೆಯುವುದು ಕಷ್ಟವಾಗುತ್ತದೆ. ಖಾಸಗಿ ವೈದ್ಯಕೀಯ ಕಾಲೇಜುಗಳ ಶೇ 40ರಷ್ಟು ಸೀಟುಗಳಿಗೆ ಶುಲ್ಕ ನಿಗದಿ ಮಾಡುವ ಅಧಿಕಾರ ಸರ್ಕಾರದ ಬಳಿ ಇರಲಿದೆ. ಹಲವು ಲೋಪ ಹೊಂದಿರುವ ಈ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಬಾರದು’ ಎಂದು ಐಎಂಎ ಕರ್ನಾಟಕ ಶಾಖೆಯ ಅಧ್ಯಕ್ಷಡಾ. ಅನ್ನದಾನಿ ಮೇಟಿ ತಿಳಿಸಿದ್ದಾರೆ.

ಏನಿದೆ, ಏನಿಲ್ಲ?

*ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ, ರಕ್ತ ಪರೀಕ್ಷಾ ಕೇಂದ್ರ, ಸ್ಕ್ಯಾನಿಂಗ್‌ ಇರುವುದಿಲ್ಲ

*ತುರ್ತು ಚಿಕಿತ್ಸೆ, ಔಷಧ ಅಂಗಡಿಗಳು ಮಾತ್ರ ಲಭ್ಯ

*ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಸೇವೆ ಇರುತ್ತದೆ

*ಸರ್ಕಾರಿ ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್‌, ಒಪಿಡಿ ಸೇರಿದಂತೆ ಎಲ್ಲವೂ ದೊರೆಯಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.