ADVERTISEMENT

ವೈದ್ಯರ ಮುಷ್ಕರ: ಮಾತುಕತೆ ವಿಫಲ

ಇದೇ 18ರಂದು ಸಚಿವರ ಜತೆ ಸಭೆ ನಡೆಸಿ ತೀರ್ಮಾನ: ವೈದ್ಯರ ಸಂಘ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 19:17 IST
Last Updated 15 ಸೆಪ್ಟೆಂಬರ್ 2020, 19:17 IST

ಬೆಂಗಳೂರು: ವೇತನ ಪರಿಷ್ಕರಣೆ ಸೇರಿದಂತೆ ಸರ್ಕಾರಿ ವೈದ್ಯಾಧಿಕಾರಿಗಳ ಬೇಡಿಕೆಗಳ ಕುರಿತು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಆರೋಗ್ಯ ಸಚಿವ ಬಿ. ಶ್ರೀರಾಮುಲು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಜೊತೆ ರಾಜ್ಯ ಸರ್ಕಾರಿ ವೈದ್ಯಾಧಿಕಾರಿ ಸಂಘದ ಪದಾಧಿಕಾರಿಗಳು ನಡೆಸಿದ ಸಭೆ ಅಂತಿಮ ತೀರ್ಮಾನಕ್ಕೆ ಬರಲು ವಿಫಲವಾಗಿದೆ.

ಸಭೆಯ ಬಳಿಕ ಮಾತನಾಡಿದ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ಜಿ.ಎ. ಶ್ರೀನಿವಾಸ್, ‘ನಮ್ಮ ಬೇಡಿಕೆಗಳ ಕುರಿತು ಸಚಿವರು ನೀಡಿರುವ ಭರವಸೆ ಬಗ್ಗೆ ಎಲ್ಲ ಜಿಲ್ಲೆಗಳಲ್ಲಿರುವ ಸಂಘದ ಪದಾಧಿಕಾರಿಗಳ ಜೊತೆ ವಿಚಾರ ವಿನಿಮಯ ಮಾಡಿ, ಇದೇ 18ರಂದು ಮತ್ತೊಮ್ಮೆ ಸಚಿವರ ಜತೆ ಚರ್ಚಿಸುತ್ತೇವೆ. ಅಲ್ಲಿಯವರೆಗೆ ಎಲ್ಲ ಸರ್ಕಾರಿ ಸಭೆಗಳನ್ನು ಬಹಿಷ್ಕರಿಸುವ ಮೂಲಕ ‘ಅಸಹಕಾರ’ ಮುಷ್ಕರ ಮುಂದುವರಿಯಲಿದೆ’ ಎಂದರು.

ಸಭೆಯ ಬಳಿಕ ಮಾತನಾಡಿದ ಶ್ರೀರಾಮುಲು, ‘ವೈದ್ಯರ ಸೇವೆಯನ್ನು ಸರ್ಕಾರ ಆದ್ಯತೆ ಮೇಲೆ ಪರಿಗಣಿಸಲಿದೆ. ವೇತನ ಹೆಚ್ಚಿಸಬೇಕು ಎಂಬ ಅವರ ಬೇಡಿಕೆಯ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಮತ್ತು ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿದ್ದೇವೆ’ ಎಂದರು.

ADVERTISEMENT

ಡಾ.ಸಿ.ಎನ್‌. ಅಶ್ವತ್ಥನಾರಾಯಣ ಮಾತನಾಡಿ, ‘ಕೋವಿಡ್‌ ಕರ್ತವ್ಯದಲ್ಲಿ ಮುಂಚೂಣಿ ಸೇನಾನಿಗಳಾಗಿರುವ ವೈದ್ಯರ ಸೇವೆಯ ಬಗ್ಗೆ ಎಲ್ಲರಿಗೂ ಹೆಮ್ಮೆ ಇದೆ. ಪರಿಸ್ಥಿತಿ ಅರ್ಥೈಸಿಕೊಂಡು ಅವರು ಸರ್ಕಾರ ತೆಗೆದುಕೊಳ್ಳುವ ತೀರ್ಮಾನಗಳಿಗೆ ಸಹಮತ ವ್ಯಕ್ತಪಡಿಸುವ ವಿಶ್ವಾಸವಿದೆ’ ಎಂದರು.

‘ವೇತನ ಪರಿಷ್ಕರಣೆ ಸಂಬಂಧ ವೈದ್ಯಾಧಿಕಾರಿಗಳ ಜತೆ ನಡೆಸಿದ ಸಭೆ ಫಲಪ್ರದವಾಗಿದೆ. ಆರೋಗ್ಯ ಇಲಾಖೆಯ ಎಲ್ಲ ಪ್ರಸ್ತಾವನೆಗಳಿಗೂ ಮುಖ್ಯಮಂತ್ರಿ ಒಪ್ಪಿದ್ದಾರೆ. ಅದರಂತೆ ಈ ಬೇಡಿಕೆಯೂ ಈಡೇರಲಿದೆ’ ಎಂದು ಡಾ.ಕೆ. ಸುಧಾಕರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.