
ಬೆಂಗಳೂರು: ‘ವಿವಾಹಿತೆಯ ಮೇಲೆ ಆಕೆಯ ಪತಿ ಅಥವಾ ಅವರ ಸಂಬಂಧಿಕರು ನಡೆಸುವ ಕ್ರೌರ್ಯ ಮತ್ತು ಕಿರುಕುಳವನ್ನು ನಿಷೇಧಿಸುವ ಕಲಂ 498–ಎ ಅಡಿಯಲ್ಲಿ ಪಕ್ಕದ ಮನೆಯವರ ವಿರುದ್ಧ ಪ್ರಕರಣ ದಾಖಲಿಸುವಂತಿಲ್ಲ’ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
‘ವರದಕ್ಷಿಣೆ ಕಿರುಕುಳ ನೀಡುವಂತೆ ನನ್ನ ಪತಿ ಮತ್ತು ಕುಟುಂಬದವರಿಗೆ ನೆರೆಯವರು ಪ್ರಚೋದನೆ ನೀಡಿದ್ದಾರೆ’ ಎಂದು ಆರೋಪಿಸಲಾದ ದೂರಿನಲ್ಲಿ, ‘ನಮ್ಮ ವಿರುದ್ಧವೂ ದಾಖಲಿಸಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಪ್ರಕರಣದ ಪತಿಯ ಮನೆಯ ನೆರೆಯವರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು (ಸಿಆರ್‌ಎಲ್‌ಪಿ 1504/2023) ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.
‘ಈ ಪ್ರಕರಣದಲ್ಲಿನ ದೋಷಾರೋಪ ಪಟ್ಟಿಯಲ್ಲಿ ಅರ್ಜಿದಾರರ ವಿರುದ್ಧ ಯಾವುದೇ ಆರೋಪದ ಅಂಶಗಳ ಉಲ್ಲೇಖವಿಲ್ಲ. ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 498–ಎ ಅಡಿಯಲ್ಲಿನ ಪ್ರಕರಣಗಳು ಪತಿ, ಪತ್ನಿ ಸೇರಿದಂತೆ ಕುಟುಂಬಸ್ಥರ ನಡುವಿನ ಪ್ರಕರಣಗಳಾಗಿರುತ್ತವೆ. ಇದರಲ್ಲಿ ಇತರರನ್ನು ಸೆಳೆಯುವುದಕ್ಕೆ ಅವಕಾಶವಿಲ್ಲ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಅಂತೆಯೇ, ಅರ್ಜಿದಾರರ ವಿರುದ್ಧ ಬೆಂಗಳೂರಿನ ಸಿಎಂಎಂ ಕೋರ್ಟ್‌ನಲ್ಲಿರುವ ಕ್ರಿಮಿನಲ್ ಪ್ರಕರಣವನ್ನು ನ್ಯಾಯಪೀಠ ರದ್ದುಗೊಳಿಸಿ ಆದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.