ADVERTISEMENT

ರಾಹುಲ್ ಮಾತನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಕಿಲ್ಲ: ಸಚಿವ ಜೋಶಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 6:02 IST
Last Updated 2 ಅಕ್ಟೋಬರ್ 2022, 6:02 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ನಕಲಿ ಗಾಂಧಿ ಪರಿವಾರವು ಭ್ರಷ್ಟಾಚಾರದ ಕುರಿತು ಮಾತನಾಡುತ್ತಿರುವುದು ದುರಂತ. ರಾಹುಲ್ ಗಾಂಧಿ ಅವರ ಮಾತನ್ನು ಸಿರಿಯಸ್ ಆಗಿ ತೆಗೆದುಕೊಳ್ಳಬೇಕಿಲ್ಲ.

ಭಾರತ ಜೋಡೋ ಯಾತ್ರೆ ಮುಗಿದ ತಕ್ಷಣ ವಿಶ್ರಾಂತಿಗಾಗಿ ಅವರು ವಿದೇಶಕ್ಕೆ ಹೋಗುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು.

ಗಾಂಧಿ ಜಯಂತಿ ಅಂಗವಾಗಿ, ಭಾನುವಾರ ನಗರದ ಕಿಮ್ಸ್ ಆಸ್ಪತ್ರೆ ಪ್ರವೇಶ ದ್ವಾರದ ಬಳಿಯ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ADVERTISEMENT

ಹಿಂದಿನ ಚುನಾವಣೆಯಲ್ಲೇ ಜನರು ತಾವು ಯಾರ ಪರ ಇದ್ದೇವೆ ಎಂಬ ತೀರ್ಮಾನ ಕೊಟ್ಟಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ಮತ್ತು ಹಗರಣಗಳದ್ದೇ ಸುದ್ದಿ ಇತ್ತು. ಅಂತಹವರು ಈಗ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.

'ಮೋದಿ ಆಡಳಿತದಲ್ಲಿ ದೇಶದ ಸಾಲ ಮೂರು ಪಟ್ಟು ಹೆಚ್ಚಾಗಿದೆ' ಎಂಬ ರಾಹುಲ್ ಗಾಂಧಿ ಮಾತಿಗೆ ಪ್ರತಿಕ್ರಿಯಿಸಿದ ಅವರು, 'ದೇಶದಲ್ಲಿ ಯಾರ ಕಾಲದಲ್ಲಿ ಹೆಚ್ಚು ಸಾಲ ಆಗಿದೆ ಎಂಬುದನ್ನು ಅಂಕಿಅಂಶಗಳು ತೋರಿಸುತ್ತವೆ. ಕೋವಿಡ್-18 ಪರಿಸ್ಥಿತಿಯನ್ನು ಸರ್ಕಾರ ಯಶಸ್ವಿಯಾಗಿ ನಿಭಾಯಿಸಿದೆ. ಭಾರತ ಅಭಿವೃದ್ಧಿ ಹೊಂದುತ್ತಿದೆ. ಪ್ರಪಂಚವೇ ಭಾರತವನ್ನು ಗುರುತಿಸುವಂತಾಗಿದೆ. ದೇಶದ ಹಿರಿಮೆ ಬಗ್ಗೆ ಅಪಪ್ರಚಾರ ಮಾಡಬಾರದು' ಎಂದು ತಿರುಗೇಟು ನೀಡಿದರು.

'ಇನ್ನೊಬ್ಬರು ಬರೆದುಕೊಟ್ಟ ಚೀಟಿ ಇಟ್ಟುಕೊಂಡು ಭಾಷಣ ಮಾಡುವ ರಾಹುಲ್ ಗಾಂಧಿ ಅವರಿಗೆ ಮಾನ ಮರ್ಯಾದೆ ಇಲ್ಲ. ಚೀಟಿ ವಾಪಸ್ ಪಡೆದರೆ, ಅದರಲ್ಲಿದ್ದ ವಿಷಯವೇ ಅವರಿಗೇ ಗೊತ್ತಿರುವುದಿಲ್ಲ. ಉತ್ತರಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ 398 ಅಭ್ಯರ್ಥಿಗಳು ಡಿಪಾಸಿಟ್ ಕಳೆದುಕೊಂಡಿದ್ದಾರೆ. ದೇಶದಾದ್ಯಂತ ಆ ಪಕ್ಷದ ಸ್ಥಿತಿ ಹೀಗೆಯೇ ಇದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.