ADVERTISEMENT

ವರದಕ್ಷಿಣೆ ಕಿರುಕುಳ: ಗೃಹಿಣಿ ಸಾವು

​ಪ್ರಜಾವಾಣಿ ವಾರ್ತೆ
Published 30 ಜೂನ್ 2019, 16:36 IST
Last Updated 30 ಜೂನ್ 2019, 16:36 IST

ಮೈಸೂರು: ವರದಕ್ಷಿಣೆ ಕಿರುಕುಳ ಸಹಿಸಲಾಗದೆ ಗೃಹಿಣಿಯೊಬ್ಬರು ಪತಿ ಮನೆಯಲ್ಲೇ ಭಾನುವಾರ ನೇಣಿಗೆ ಶರಣಾಗಿದ್ದಾರೆ.

ಯರಗನಹಳ್ಳಿಯ ಸೌಮ್ಯಾ (24) ನೇಣಿಗೆ ಶರಣಾದವರು.

‘ಮೈಸೂರು ತಾಲ್ಲೂಕಿನ ಮರೆಸತ್ತನಹಳ್ಳಿಯ ಸೌಮ್ಯಾ ವರ್ಷದ ಹಿಂದಷ್ಟೇ ನಗರದ ಯರಗನಹಳ್ಳಿಯ ಶಿವು ಎಂಬಾತನ ಜತೆ ವಿವಾಹವಾಗಿದ್ದರು. ಪೋಷಕರು ಅದ್ದೂರಿಯಿಂದ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದ ಕೆಲ ದಿನಗಳ ಬಳಿಕ ಶಿವು ವರದಕ್ಷಿಣೆ ಕಿರುಕುಳ ನೀಡಲಾರಂಭಿಸಿದ್ದ. ಸೌಮ್ಯಾ ನಿರಾಕರಿಸುತ್ತಿದ್ದಳು. ವರದಕ್ಷಿಣೆ ತರಲಿಲ್ಲ ಎಂದೇ ಶಿವು ಹಾಗೂ ಆತನ ಕುಟುಂಬದ ಇನ್ನಿತರರು ಸೇರಿಕೊಂಡು ಸೌಮ್ಯಾಳನ್ನು ಕೊಲೆಗೈದು, ನೇಣು ಹಾಕಿದ್ದಾರೆ ಎಂದು ಮೃತೆಯ ಪೋಷಕರು ದೂರು ನೀಡಿದ್ದಾರೆ’ ಎಂದು ಆಲನಹಳ್ಳಿ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಸೌಮ್ಯಾಳ ಸಾವಿನ ಸುದ್ದಿ ತಿಳಿದ ತವರು ಗ್ರಾಮದವರು, ಶವವಿಟ್ಟಿದ್ದ ಕಾವೇರಿ ಆಸ್ಪತ್ರೆ ಮುಂಭಾಗ ಅಪಾರ ಸಂಖ್ಯೆಯಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದರು. ಸೌಮ್ಯಾ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಮ್ಯಾ ಪತಿ ಶಿವು, ಆಕೆಯ ಅತ್ತೆ, ಮಾವ, ನಾದಿನಿ ಸೇರಿದಂತೆ ಐವರ ವಿರುದ್ಧ ಆಲನಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ತನಿಖೆ ಚುರುಕು: ಚಾಮುಂಡಿಬೆಟ್ಟದ ತಪ್ಪಲಿನ ಗೌರಿಶಂಕರ ನಗರದ ಕುಷ್ಠ ರೋಗಿಗಳ ಕಾಲೊನಿಯಲ್ಲಿ ಶನಿವಾರ ಮಧ್ಯಾಹ್ನ ಕ್ರಿಕೆಟ್‌ ಆಡುತ್ತಿದ್ದ ಸಂದರ್ಭ, ದುಷ್ಕರ್ಮಿಗಳ ಗುಂಪಿನ ಅಟ್ಟಹಾಸಕ್ಕೆ ಹಾಡಹಗಲೇ ಬಲಿಯಾದ ಸುನೀಲ್‌ಕುಮಾರ್ ಕೊಲೆಗೆ ಸಂಬಂಧಿಸಿದಂತೆ ಕೃಷ್ಣರಾಜ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಶೀಘ್ರವೇ ಕೊಲೆ ಆರೋಪಿಗಳನ್ನು ಬಂಧಿಸಲಾಗುವುದು ಎಂಬುದು ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.