ADVERTISEMENT

ಮೋಡ ಬಿತ್ತನೆಗೆ ₹88 ಕೋಟಿ

​ಪ್ರಜಾವಾಣಿ ವಾರ್ತೆ
Published 15 ಮೇ 2019, 19:07 IST
Last Updated 15 ಮೇ 2019, 19:07 IST
   

ಬೆಂಗಳೂರು: ₹88 ಕೋಟಿ ವೆಚ್ಚದಲ್ಲಿ ಮೋಡ ಬಿತ್ತನೆ ಮಾಡಿ ಮಳೆ ತರಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

ಬರ ಪರಿಸ್ಥಿತಿ ಕುರಿತು ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಬುಧವಾರ ನಡೆದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ವಿಡಿಯೊ ಸಂವಾದ ನಡೆಸಿದರು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ನೀರಿನ ಬವಣೆಯನ್ನು ಅಧಿಕಾರಿಗಳು ವಿವರಿಸಿದರು.

ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ‘ಈ ವರ್ಷ ಮುಂಗಾರು ಕೊರತೆಯ ಮುನ್ಸೂಚನೆ ಸಿಕ್ಕಿದ್ದು, ಜೂನ್ ಅಂತ್ಯಕ್ಕೆ ಮೋಡ ಬಿತ್ತನೆ ಆರಂಭಿಸಲಾಗುವುದು. 2 ವರ್ಷದ ಅವಧಿಗೆ ₹88 ಕೋಟಿ ಅಗತ್ಯ ಎಂದು ಅಂದಾಜಿಸಲಾಗಿದ್ದು, ಈಗಾಗಲೇ ಟೆಂಡರ್ ಕರೆಯಲಾಗಿದೆ’ ಎಂದರು.

ADVERTISEMENT

‘ಮೋಡಗಳ ಲಭ್ಯತೆ, ಮಳೆಯ ಕೊರತೆಯನ್ನು ಮಾನದಂಡವಾಗಿ ಇಟ್ಟುಕೊಂಡು ಮೋಡ ಬಿತ್ತನೆ ನಡೆಸಲಾಗುವುದು. ಬೆಂಗಳೂರು, ಹುಬ್ಬಳ್ಳಿಯಲ್ಲಿ ಕೇಂದ್ರ ತೆರೆಯಲಾಗುವುದು. ತಜ್ಞರ ಸಮಿತಿ ಸಹ ಮೋಡ ಬಿತ್ತನೆ ಅವಶ್ಯ ಎಂದು ಅಭಿಪ್ರಾಯಪಟ್ಟಿದೆ’ ಎಂದರು.

‘ಈ ಹಿಂದಿನ ವರ್ಷಗಳಲ್ಲಿ ಆಗಸ್ಟ್‌ನಲ್ಲಿ ಮೋಡ ಬಿತ್ತನೆ ಕಾರ್ಯ ನಡೆಸಲಾಗುತ್ತಿತ್ತು. ಆದರೆ, ಅಷ್ಟೊತ್ತಿಗೆ ರೈತರ ಬಿತ್ತನೆ ಕಾರ್ಯಗಳು ಮುಗಿದಿರುತ್ತವೆ. ಕೃಷಿಗೆ ನೀರು ಅವಶ್ಯ ಇರುವ ಜೂನ್‌ನಲ್ಲೇ ನಡೆಸಲಾಗುವುದು’ ಎಂದರು.

ಮೂರನೇ ಯತ್ನ: ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ 2003ರಲ್ಲಿ ಮೊದಲ ಬಾರಿಗೆ ಮೋಡ ಬಿತ್ತನೆ ನಡೆದಿತ್ತು. ‘ಪ್ರಾಜೆಕ್ಟ್‌ ವರುಣ’ ಹೆಸರಿನಲ್ಲಿ ನಡೆದ 80 ದಿನಗಳ ಮೋಡ ಬಿತ್ತನೆಗೆ ₹9 ಕೋಟಿ ಖರ್ಚಾಗಿತ್ತು.

2017ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ‘ಪ್ರಾಜೆಕ್ಟ್‌ ವರ್ಷಧಾರೆ’ ಹೆಸರಿನಲ್ಲಿ ₹ 35 ಕೋಟಿ ವೆಚ್ಚ
ದಲ್ಲಿ ಮೋಡ ಬಿತ್ತನೆ ಮಾಡಲಾಗಿತ್ತು.

ಟ್ಯಾಂಕರ್‌ಗೆ ಜಿಪಿಎಸ್‌

ನೀರಿನ ಅಭಾವದ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಟ್ಯಾಂಕರ್‌ಗಳ ಮಾಲೀಕರು ಸುಳ್ಳು ಬಿಲ್ ನೀಡಿ ಹಣ ಪಡೆಯುತ್ತಿರುವುದನ್ನು ತಪ್ಪಿಸಲು ಟ್ಯಾಂಕ್‌ರಗಳಿಗೆ ಜಿಪಿಎಸ್‌ ಕಡ್ಡಾಯಗೊಳಿಸಲು ಸರ್ಕಾರ ನಿರ್ಧರಿಸಿದೆ. ಒಂದು ಟ್ಯಾಂಕರ್ ನೀರು ಸರಬರಾಜು ಮಾಡಿ, ನಾಲ್ಕೈದು ಟ್ಯಾಂಕರ್ ಸರಬರಾಜು ಮಾಡಿದಂತೆ ದಾಖಲೆ ತೋರಿಸಿ ಬಿಲ್‍ಪಡೆದುಕೊಳ್ಳಲಾಗುತ್ತಿದೆ ಎಂಬ ವಿಷಯ ಬುಧವಾರ ನಡೆದ ಸಭೆಯಲ್ಲಿ ಪ್ರಸ್ತಾಪವಾಯಿತು. ‘ಹಣ ಸೋರಿಕೆ ತಪ್ಪಿಸಲು ಎಲ್ಲ ಟ್ಯಾಂಕರ್‌ಗಳಿಗೆ ಜಿಪಿಎಸ್ ಅಳವಡಿಸಿ. ದುರುಪಯೋಗ ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಮುಖ್ಯಮಂತ್ರಿ ಆದೇಶಿಸಿದರು.ಜಿ.ಪಿ.ಎಸ್ ಸಾಧನವನ್ನು ಜಿಲ್ಲಾಧಿಕಾರಿಗಳೇ ಖರೀದಿಸಿ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಸೂಚಿಸಲಾಯಿತು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.