ಶಿವಮೊಗ್ಗ: ಈ ಹಿಂದೆ ತಪ್ಪು ಮಾಡಿದವರನ್ನು, ಜೈಲಿಗೆ ಹೋಗಿ ಬಂದವರನ್ನು ಸಮಾಜ ಬಹಿಷ್ಕರಿಸುತ್ತಿತ್ತು. ಆದರಿಂದು ಜೈಲಿಗೆ ಹೋಗಿ ಬಂದವರಿಗೆ ಹಾರ ಹಾಕಿ ಸನ್ಮಾನಿಸುತ್ತಿದ್ದೇವೆ. ಹಾಗಾಗಿ ಶಿಕ್ಷೆಗೆ ಇಂದು ಜನರು ಹೆದರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ವಿಷಾದ ವ್ಯಕ್ತಪಡಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಶಿವಮೊಗ್ಗ ಘಟಕದಿಂದ ಭಾನುವಾರ ಏರ್ಪಡಿಸಿದ್ದ ಮಾಧವ ಗಾಡ್ಗೀಳ್ ವರದಿ ಜಾರಿಗೆ ಒತ್ತಾಯಿಸಿ ‘ಪಶ್ಚಿಮಘಟ್ಟ ಉಳಿಸಿ’ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯುವಕರಲ್ಲಿ ಮೌಲ್ಯಗಳನ್ನು ತುಂಬಿ, ಪರಸರದಿಂದಾಗುವ ಹಾನಿಯ ಬಗ್ಗೆ ಮಾಹಿತಿ ನೀಡಿ ಅವರನ್ನು ಮುಂದಿನ ಪ್ರತಿಭಟನಕಾರರನ್ನಾಗಿ ಮಾಡಬೇಕಿದೆ ಎಂದರು.
ದೇಸಿ ಚಿಂತಕ ಹಾಗೂ ರಂಗಕರ್ಮಿ ಚರಕ ಪ್ರಸನ್ನ, ‘ಮಾಧವ ಗಾಡ್ಗೀಳ್ ವರದಿ ಸಮಗ್ರ ಸತ್ಯ. ಇದನ್ನು ಕಡೆಗಣಿಸಿದರೆ ಸಮಗ್ರವಾದ ವಿನಾಶ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಸಂಸ್ಥಾಪಕರಾದ ಕೆ.ಎನ್.ಗೋವಿಂದಾಚಾರ್ಯ, ‘ಒಂದು ರಾಷ್ಟ್ರದ ಅಭಿವೃದ್ಧಿಯನ್ನು ಅಳೆಯಬೇಕಾದದ್ದು ಜಿಡಿಪಿಯಿಂದ ಅಲ್ಲ; ಬದಲಾಗಿ ಆ ದೇಶದ ಮಣ್ಣಿನ ಫಲವತ್ತತೆ, ಅಂತರ್ಜಲದ ಮಟ್ಟ, ಅರಣ್ಯ ಪ್ರದೇಶದ ವ್ಯಾಪ್ತಿ, ಪಶು–ಜಾನುವಾರು–ಮನುಷ್ಯನ ಅನುಪಾತ ಎಷ್ಟಿದೆ ಎಂಬುದರ ಆಧಾರದ ಮೇಲೆ’ ಎಂದರು.
ಪರಿಸರವನ್ನು ಅತಿ ಹೆಚ್ಚು ಹಾಳು ಮಾಡುವ ಯೋಜನೆಯೇ ಎತ್ತಿನಹೊಳೆ ಯೋಜನೆ ಎಂದು ಐಎಫ್‌ಎಸ್ ನಿವೃತ್ತ ಅಧಿಕಾರಿ ಯಲ್ಲಪ್ಪ ರೆಡ್ಡಿ ಹೇಳಿದರು.
ಪರಿಸರವಾದಿ ಪ್ರೊ.ಬಿ.ಎಂ.ಕುಮಾರಸ್ವಾಮಿ, ಜಿಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾದ ಕಾರ್ಯದರ್ಶಿ ಆರ್.ಎಸ್.ಸಾವ್ಕಾರ್ ಉಪಸ್ಥಿತರಿದ್ದರು.
ಸಮಾವೇಶದಲ್ಲಿ ತೆಗೆದುಕೊಂಡ ಪ್ರಮುಖ ನಿರ್ಣಯಗಳು
1) ಪಶ್ಚಿಮ ಘಟ್ಟ ಪ್ರದೇಶವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು.
2) ಕೇರಳ ಮತ್ತು ಕೊಡಗು ಜಿಲ್ಲೆಯಲ್ಲಿ ಉಂಟಾದ ಭಾರಿ ಪ್ರವಾಹ, ಭೂ ಕುಸಿತ, ಪ್ರಾಣಹಾನಿ ಮತ್ತು ಆಸ್ತಿ ಹಾನಿಯ ಹಿನ್ನಲೆಯಲ್ಲಿ ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು.
3) ಗಾಡ್ಗೀಳ್ ವರದಿಯನ್ನೇ ಪರಿಗಣಿಸಿ, ಖುದ್ದಾಗಿ ಜಾರಿಗೆ ತರಬೇಕು.
4) ಆಘಾತಕಾರಿ, ವಿನಾಶಕಾರಿ ಯೋಜನೆಗಳನ್ನು ಕೂಡಲೇ ನಿಲ್ಲಿಸಬೇಕು.
5) ಗಾಡ್ಗೀಳ್ ವರದಿಯ ಅನುಷ್ಠಾನದ ಸಂದರ್ಭದಲ್ಲಿ ಜನರಿಗೆ ನಷ್ಟಗಳು ಉಂಟಾದಲ್ಲಿ ಹೆಚ್ಚಿನ ಪರಿಹಾರ ನೀಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.