ADVERTISEMENT

ಮತ್ತೆ 35 ತಾಲ್ಲೂಕು ಬರಪೀಡಿತ?

ಸಚಿವ ಸಂಪುಟ ಉಪಸಮಿತಿ ಸಭೆ 26ರಂದು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 17:26 IST
Last Updated 25 ಡಿಸೆಂಬರ್ 2018, 17:26 IST

ಬೆಂಗಳೂರು: ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳ ಪಟ್ಟಿಗೆ ಮತ್ತೆ 35ರಿಂದ 40 ತಾಲ್ಲೂಕುಗಳು ಸೇರ್ಪಡೆಯಾಗಲಿವೆ.

ಕಂದಾಯ ಸಚಿವ ಆರ್‌.ವಿ.ದೇಶ‍ಪಾಂಡೆ ನೇತೃತ್ವದ ಸಚಿವ ಸಂಪುಟ ಉಪಸಮಿತಿ ಸಭೆ ವಿಧಾನಸೌಧದಲ್ಲಿ ಬುಧವಾರ ಮಧ್ಯಾಹ್ನ 12 ಗಂಟೆಗೆ ನಿಗದಿಯಾಗಿದ್ದು, ಈ ತಾಲ್ಲೂಕುಗಳ ಸೇರ್ಪಡೆಗೆ ‌ಒಪ್ಪಿಗೆ ನೀಡಲಿದೆ.

86 ತಾಲ್ಲೂಕುಗಳನ್ನು ಬರಪೀಡಿತ ಎಂದು ಆರಂಭದಲ್ಲಿ ಘೋಷಿಸಲಾಗಿತ್ತು. ಅಕ್ಟೋಬರ್‌ನಲ್ಲಿ ಮತ್ತೆ 14 ತಾಲ್ಲೂಕುಗಳನ್ನು ಸೇರ್ಪಡೆ ಮಾಡಲಾಗಿತ್ತು. ಕೇಂದ್ರ ಸರ್ಕಾರದ 2016ರ ಬರ ಕೈಪಿಡಿ ಹಾಗೂ ಪರಿಷ್ಕೃತ ಮಾರ್ಗಸೂಚಿಗಳಲ್ಲಿ ಕಡ್ಡಾಯಪಡಿಸಿರುವ ಅಂಶಗಳ ಪ್ರಕಾರ ಈ ತಾಲ್ಲೂಕುಗಳನ್ನು ಸೇರ್ಪಡೆ ಮಾಡಲಾಗುತ್ತದೆ.

ADVERTISEMENT

ಹಿಂಗಾರು ಮಳೆ ಕೊರತೆ ಆಧರಿಸಿ, ಡಿಸೆಂಬರ್‌ ಅಂತ್ಯದೊಳಗೆ ಇನ್ನಷ್ಟು ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗುವುದು ಎಂದು ಆರ್‌.ವಿ. ದೇಶಪಾಂಡೆ ಬೆಳಗಾವಿ ಅಧಿವೇಶನದಲ್ಲಿ ತಿಳಿಸಿದ್ದರು.

ಹಿಂಗಾರಿನಲ್ಲಿ ಶೇ 49ರಷ್ಟು ಮಳೆ ಅಭಾವ ಉಂಟಾಗಿದೆ. 186 ಮಿ.ಮೀ. ವಾಡಿಕೆ ಮಳೆ ಸುರಿಯಬೇಕಿತ್ತು. 95 ಮಿ.ಮೀ. ಮಾತ್ರ ಮಳೆ ಬಿದ್ದಿದೆ. ಕೊಪ್ಪಳ, ಯಾದಗಿರಿ, ರಾಯಚೂರು, ವಿಜಯಪುರ, ಗದಗ, ಹಾವೇರಿ, ಧಾರವಾಡ ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಶೇ 60ಕ್ಕಿಂತ ಹೆಚ್ಚು ಮಳೆ ಅಭಾವ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.