ADVERTISEMENT

ಬೆಂಗಳೂರಿನ ಡ್ರಗ್ಸ್‌ ಜಾಲ ಇನ್ನೂ ದೊಡ್ಡದಿದೆ: ಸಚಿವ ಎಚ್‌. ನಾಗೇಶ್

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2020, 8:25 IST
Last Updated 29 ಆಗಸ್ಟ್ 2020, 8:25 IST
ಅಬಕಾರಿ ಸಚಿವ ಎಚ್‌. ನಾಗೇಶ್‌
ಅಬಕಾರಿ ಸಚಿವ ಎಚ್‌. ನಾಗೇಶ್‌   

ಬೆಳಗಾವಿ: ‘ಬೆಂಗಳೂರಿನಲ್ಲಿ ಡ್ರಗ್ಸ್ ಜಾಲ ದೊಡ್ಡ ಪ್ರಮಾಣದಲ್ಲಿದೆ. ಮೊನ್ನೆ ಪತ್ತೆಯಾಗಿರುವುದು ಸ್ಯಾಂಪಲ್ ಅಷ್ಟೇ’ ಎಂದು ಅಬಕಾರಿ ಸಚಿವ ಎಚ್‌.ನಾಗೇಶ್‌ ತಿಳಿಸಿದರು.

ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಬೆಂಗಳೂರಿನಲ್ಲಿ 1.30 ಕೋಟಿ ಜನಸಂಖ್ಯೆ ಇದೆ. ಯಾವ ಏರಿಯಾ, ಅಪಾರ್ಟ್‌ಮೆಂಟ್‌ನಲ್ಲಿ ಏನಾಗುತ್ತದೆ ಎನ್ನುವುದು ಗೊತ್ತಾಗುವುದಿಲ್ಲ. ಅದಕ್ಕಾಗಿಯೇ ಕಣ್ಗಾವಲು ಇಡಬೇಕು. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದರು.

ADVERTISEMENT

‘ಡ್ರಗ್ಸ್ ದಂಧೆ ತಡೆಯದಿದ್ದರೆ ಅಮಾಯಕರು ಬಲಿಯಾಗುತ್ತಾರೆ. ಶಾಲಾ ಮಕ್ಕಳು ಜೀವನವೂ ಹಾಳಾಗುತ್ತದೆ. ಆರೋಗ್ಯ ಮತ್ತು ಸಮಾಜದ ಹಿತ ಕಾಪಾಡುವ ಉದ್ದೇಶದಿಂದ ಪೊಲೀಸ್ ಮತ್ತು ಅಬಕಾರಿ ಇಲಾಖೆ ಒಟ್ಟಾಗಿ ಕಾರ್ಯಾಚರಣೆ ಮಾಡಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಡ್ರಗ್ಸ್ ಅಡ್ಡೆಗಳ ಮೇಲೆ ದಾಳಿ ಮಾಡುವ ಮುನ್ಸೂಚನೆ ನೀಡಿದರು.

ಡ್ರಗ್ಸ್ ಜಾಲದಲ್ಲಿ ಚಿತ್ರರಂಗದವರು ಹಾಗೂ ರಾಜಕಾರಣಿಗಳ ಮಕ್ಕಳ ಹೆಸರು ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅದು ಬಹಳ ದುಬಾರಿ ಇರುವುದರಿಂದ ದುಡ್ಡು ಇದ್ದ ಸ್ಥಿತಿವಂತರು ಜಾಲದ ಬಲೆಗೆ ಬೀಳುತ್ತಿದ್ದಾರೆ’ ಎಂದರು.

‘ಶಾಲಾ–ಕಾಲೇಜುಗಳ ಪುನರಾರಂಭದ ಬಳಿಕ ದಂಧೆಕೋರರ ಚಲನವಲನಗಳನ್ನು ಪರಿಶೀಲಿಸುತ್ತೇವೆ. ಶಾಲಾ– ಕಾಲೇಜುಗಳ ಕಾಂಪೌಂಡ್‌ಗಳ ಹಿಂದೆ ದಂಧೆ ನಡೆಯುತ್ತದೆ ಎಂದು ಗೊತ್ತಾಗಿದೆ. ಅದರ ಬಗ್ಗೆಯೂ ನಿಗಾ ವಹಿಸಲಾಗುವುದು’ ಎಂದು ಹೇಳಿದರು.

‘ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯಲು ಮುಂದಿನ ತಿಂಗಳಿಂದ ಅನುಮತಿ ದೊರೆಯುವ ಸಾಧ್ಯತೆ ಇದೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.