
ಬೆಂಗಳೂರು: ವೈದ್ಯಕೀಯ ಪದವಿ ವಿದ್ಯಾರ್ಥಿಗಳ ₹33.34 ಕೋಟಿ ಮೊತ್ತದಷ್ಟು ಸ್ಟೈಫಂಡ್ ಕಬಳಿಸಿದ್ದ ಪ್ರಕರಣದಲ್ಲಿ ಹೈದರಾಬಾದ್ ಎಜುಕೇಶನ್ ಸೊಸೈಟಿಯ ಭೀಮಾಶಂಕರ್ ಬಿಳಗುಂಡಿ, ಮಲ್ಲಣ್ಣ ಎಸ್.ಮದ್ದಾರ್ಕಿ ವಿರುದ್ಧ ಜಾರಿ ನಿರ್ದೇಶನಾಲಯವು ಪ್ರಾಸಿಕ್ಯೂಷನ್ ದೂರು ದಾಖಲಿಸಿದೆ.
ಮಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ಮಂಗಳವಾರ ಪ್ರಾಸಿಕ್ಯೂಷನ್ ದೂರು ದಾಖಲಿಸಿದೆ.
ಹೈದರಾಬಾದ್ ಎಜುಕೇಶನ್ ಸೊಸೈಟಿಯ ‘ಮಹದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜ್’ನ ವಿದ್ಯಾರ್ಥಿಗಳಿಗೆ ಸಿಗಬೇಕಾಗಿದ್ದ ಸ್ಟೈಫಂಡ್ ಅನ್ನು ಆರೋಪಿಗಳು ಕಬಳಿಸಿದ್ದರು. 2018ರಿಂದ 2024ರ ಅವಧಿಯಲ್ಲಿ ತಮ್ಮ ಕಾಲೇಜಿಗೆ ದಾಖಲಾದ ವಿದ್ಯಾರ್ಥಿಗಳಿಂದ, ಪ್ರವೇಶಾತಿ ಸಂದರ್ಭದಲ್ಲಿಯೇ ಖಾಲಿ ಚೆಕ್‌ಗಳಿಗೆ ಸಹಿ ಮಾಡಿಸಿಕೊಂಡಿದ್ದರು. ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಬಂದಾಗ, ಆ ಚೆಕ್‌ಗಳನ್ನು ಬಳಸಿಕೊಂಡು ತಾವೇ ಹಣ ಪಡೆದುಕೊಂಡಿದ್ದರು ಎಂದು ಇ.ಡಿ ವಿವರಿಸಿದೆ.
ವಿದ್ಯಾರ್ಥಿಗಳ ಹಣವನ್ನು ಅಕ್ರಮವಾಗಿ ಡ್ರಾ ಮಾಡಿಕೊಳ್ಳುವಲ್ಲಿ ಕೆನರಾ ಬ್ಯಾಂಕ್‌ನ ನೌಕರ ಎಸ್.ಎಂ.ಪಾಟೀಲ ಸಹಕರಿಸಿದ್ದರು. ಮೂವರು ಸೇರಿಯೇ ಈ ಅಕ್ರಮ ಎಸಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂವರು ಆರೋಪಿಗಳಿಗೆ ಸೇರಿದ ₹6.72 ಕೋಟಿ ಮೌಲ್ಯದ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.