ADVERTISEMENT

ಸ್ಟೈಫಂಡ್‌ ದುರ್ಬಳಕೆ ಆರೋಪ: ಕಾಂಗ್ರೆಸ್ ಮುಖಂಡ ಸೇರಿ ಮೂವರ ಮನೆಗಳ ಮೇಲೆ ED ದಾಳಿ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 10:08 IST
Last Updated 30 ಏಪ್ರಿಲ್ 2025, 10:08 IST
<div class="paragraphs"><p>ಇ.ಡಿ ದಾಳಿ ಸಂಬಂಧ ಕಲಬುರಗಿ ನಗರದ ಭೀಮಾಶಂಕರ ಬಿಲಗುಂದಿ ಅವರ ಮನೆ ಮುಂದೆ ಭದ್ರತೆಗೆ ನಿಯೋಜನೆಗೊಂಡ ಸಿಬ್ಬಂದಿ</p></div>

ಇ.ಡಿ ದಾಳಿ ಸಂಬಂಧ ಕಲಬುರಗಿ ನಗರದ ಭೀಮಾಶಂಕರ ಬಿಲಗುಂದಿ ಅವರ ಮನೆ ಮುಂದೆ ಭದ್ರತೆಗೆ ನಿಯೋಜನೆಗೊಂಡ ಸಿಬ್ಬಂದಿ

   

ಪ್ರಜಾವಾಣಿ ಚಿತ್ರ

ಕಲಬುರಗಿ: ವೈದ್ಯಕೀಯ ವಿದ್ಯಾರ್ಥಿಗಳ ಸ್ಟೈಫಂಡ್‌ ದುರ್ಬಳಕೆ ಆರೋಪದಡಿ ಕಾಂಗ್ರೆಸ್ ಮುಖಂಡ ಭೀಮಾಶಂಕರ ಬಿಲಗುಂದಿ ಸೇರಿದಂತೆ ಮೂವರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬುಧವಾರ ದಾಳಿ ಮಾಡಿ, ಶೋಧ ನಡೆಸಿದ್ದಾರೆ.

ADVERTISEMENT

ಹೈದರಾಬಾದ್ ಶಿಕ್ಷಣ ಸಂಸ್ಥೆಯ (ಎಚ್‌ಕೆಎ) ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿನ (ಎಂಆರ್‌ಎಂಸಿ) ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳ ಸ್ಟೈಫಂಡ್‌ ದುರ್ಬಳಕೆ ಮಾಡಿಕೊಂಡ ಆರೋಪದಡಿ ಸಂಸ್ಥೆಯ ಮಾಜಿ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ, ಕಾಲೇಜಿನ ಪ್ರಾಚಾರ್ಯ ಡಾ.ಎಸ್‌.ಎಂ. ಪಾಟೀಲ, ಕಾಲೇಜಿನ ಅಕೌಂಟೆಂಟ್ ಸುಭಾಷ ಜಗನ್ನಾಥ ಮತ್ತು ಕೆನರಾ ಬ್ಯಾಂಕ್‌ ಎಂಆರ್‌ಎಂಸಿ ಶಾಖೆಯ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಭೀಮಾಶಂಕರ ಬಿಲಗುಂದಿ, ಡಾ.ಎಸ್‌.ಎಂ. ಪಾಟೀಲ, ಸುಭಾಷ ಜಗನ್ನಾಥ ಅವರ ಮನೆಗಳಲ್ಲಿ ಶೋಧ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬುಧವಾರ ಬೆಳಿಗ್ಗೆ ಒಂಬತ್ತು ಇನ್ನೋವಾ ಕಾರುಗಳಲ್ಲಿ 30ಕ್ಕೂ ಹೆಚ್ಚು ಇ.ಡಿ. ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮನೆಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಕೆನರಾ ಬ್ಯಾಂಕ್‌ ಎಂಆರ್‌ಎಂಸಿ ಶಾಖೆಯ ವ್ಯವಸ್ಥಾಪಕರ ಮನೆ ಮೇಲಿನ ದಾಳಿಯ ಬಗ್ಗೆ ತಿಳಿದುಬಂದಿಲ್ಲ ಎಂದು ಮೂಲಗಳು ಹೇಳಿವೆ.

ಏನಿದು ಪ್ರಕರಣ?: 2018ರಿಂದ 2024ರವರೆಗೆ ಎಂಆರ್‌ಎಂಸಿಯ 282 ಪಿಜಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೇರಬೇಕಿದ್ದ ₹ 81.21 ಕೋಟಿ ಸ್ಟೈಫಂಡ್ ಹಣವನ್ನು ಭೀಮಾಶಂಕರ ಸೇರಿ ನಾಲ್ವರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ 2023ರ ಮಾರ್ಚ್‌ 31ರಂದು ‘ಸೆನ್’ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿದ್ಯಾರ್ಥಿಗಳ ಖಾತೆಗೆ ಸ್ಟೈಫಂಡ್ ಹಣ ಜಮೆ ಮಾಡಿಸಿ, ಬಳಿಕ ವಿದ್ಯಾರ್ಥಿಗಳಿಂದ ಖಾಲಿ ಚೆಕ್‌ಗಳಿಗೆ ಅಕ್ರಮವಾಗಿ ಸಹಿ ಪಡೆದುಕೊಂಡಿದ್ದರು. ಆ ನಂತರ ಅಕ್ರಮವಾಗಿ ಸ್ಟೈಫಂಡ್‌ ಹಣವನ್ನು ವಿತ್‌ಡ್ರಾ ಮಾಡಿಕೊಂಡ ಈ ನಾಲ್ವರು, ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಈ ಪ್ರಕರಣ ಸಂಬಂಧ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.