ಇ.ಡಿ
ಬೆಂಗಳೂರು: 2017ರಲ್ಲಿ ಕರ್ನಾಟಕ ವಕ್ಫ್ ಮಂಡಳಿಯ ₹4 ಕೋಟಿಯನ್ನು ಖಾಸಗಿ ಕಂಪನಿಗಳ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಿದ್ದ ಪ್ರಕರಣದಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದ ₹3.82 ಕೋಟಿಯನ್ನು ಜಾರಿ ನಿರ್ದೇಶನಾಲಯವು (ಇ.ಡಿ), ವಾಪಸ್ ಮಾಡಿದೆ.
‘ತಾನು ವಿಜಯ ಬ್ಯಾಂಕ್ ನೌಕರ ಎಂದು ಹೇಳಿಕೊಂಡಿದ್ದ ವ್ಯಕ್ತಿಯೊಬ್ಬ ವಕ್ಫ್ ಮಂಡಳಿಗೆ ಭೇಟಿ ನೀಡಿ, ‘ತಮ್ಮ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿ. ಹೆಚ್ಚಿನ ಬಡ್ಡಿ ಬರುತ್ತದೆ’ ಎಂದು ತಿಳಿಸಿದ್ದ. ಇದಕ್ಕೆ ಒಪ್ಪಿದ್ದ ಮಂಡಳಿಯ ಅಧಿಕಾರಿಗಳು ಆತನಿಗೆ ಎರಡು ಚೆಕ್‌ಗಳನ್ನು ನೀಡಿದ್ದರು’ ಎಂದು ಇ.ಡಿ ತಿಳಿಸಿದೆ.
‘ಚೆಕ್ ನೀಡಿ ಹಲವು ದಿನಗಳಾದರೂ, ಠೇವಣಿಯ ರಸೀದಿಯನ್ನು ಬ್ಯಾಂಕ್ ಒದಗಿಸಿರಲಿಲ್ಲ. ಮಂಡಳಿಯ ಅಧಿಕಾರಿಗಳು ಬ್ಯಾಂಕ್‌ನಲ್ಲಿ ವಿಚಾರಿಸಿದಾಗ, ಅಜಯ್ ಶರ್ಮಾ ಟ್ರೇಡಿಂಗ್ ಕಾರ್ಪೊರೇಷನ್ ಎಂಬ ಕಂಪನಿಯ ಖಾತೆಗೆ ಆ ಹಣ ವರ್ಗಾವಣೆಯಾಗಿತ್ತು. ಅಧಿಕಾರಿಗಳು ನೀಡಿದ್ದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದರು. ಬಹುಕೋಟಿ ಹಗರಣವಾಗಿದ್ದ ಕಾರಣ ಇಸಿಐಆರ್ ದಾಖಲಿಸಿ, ತನಿಖೆ ಆರಂಭಿಸಿದ್ದೆವು’ ಎಂದು ಇ.ಡಿ ತಿಳಿಸಿದೆ.
‘ಅಜಯ್ ಶರ್ಮಾ ಕಂಪನಿಯಿಂದ ವರ್ಕೀಸ್ ರಿಯಾಲಟೀಸ್ ಪ್ರೈವೇಟ್ ಲಿಮಿಟೆಡ್‌ಗೆ ₹1.10 ಕೋಟಿ ವರ್ಗಾವಣೆಯಾಗಿತ್ತು. ಆ ಹಣದಲ್ಲಿ ಮರ್ಸಿಡೆಸ್ ಬೆಂಜ್ ಕಂಪನಿಯ ಕಾರು ಖರೀದಿಸಲಾಗಿತ್ತು ಎಂಬುದು ತನಿಖೆಯ ವೇಳೆ ಪತ್ತೆಯಾಗಿತ್ತು’ ಎಂದು ಮಾಹಿತಿ ನೀಡಿದೆ.
ವಕ್ಫ್ ಮಂಡಳಿಯ ಇಬ್ಬರು ಅಧಿಕಾರಿಗಳು ಮತ್ತು ವಿಜಯ ಬ್ಯಾಂಕ್‌ನ ನೌಕರರ ವಿರುದ್ಧ ಇ.ಡಿ ಪ್ರಕರಣ ದಾಖಲಿಸಿತ್ತು. ಜತೆಗೆ 2017ರ ಫೆಬ್ರವರಿಯಲ್ಲಿ ₹3.82 ಕೋಟಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಿದ್ದ ಮಂಡಳಿಯು, ‘ಹಣವನ್ನು ವಾಪಸ್ ಮಾಡುವಂತೆ ಇ.ಡಿಗೆ ನಿರ್ದೇಶನ ನೀಡಿ’ ಎಂದು ಕೋರಿತ್ತು.
ಮಂಡಳಿಯ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಾಲಯವು, ಹಣವನ್ನು ವಾಪಸ್ ಮಾಡಿ ಎಂದು ಜುಲೈ 1ರಂದು ಇ.ಡಿಗೆ ಸೂಚಿಸಿತ್ತು. ಅದರಂತೆ ಜುಲೈ 7ರಂದು ಇ.ಡಿಯು, ಮಂಡಳಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜೀಲಾನಿ ಮೊಕಾಶಿ ಅವರಿಗೆ ₹3.82 ಕೋಟಿ ಮೊತ್ತದ ಚೆಕ್ ಅನ್ನು ಹಸ್ತಾಂತರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.