ಬೆಂಗಳೂರು/ತುಮಕೂರು: ಗೃಹ ಸಚಿವ ಜಿ.ಪರಮೇಶ್ವರ ಮುಖ್ಯಸ್ಥರಾಗಿರುವ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ವಿವಿಧ ಕಾಲೇಜು ಮತ್ತು ಕಚೇರಿಗಳಲ್ಲಿ ಬುಧವಾರದಿಂದ ನಡೆಸುತ್ತಿದ್ದ ಶೋಧ ಕಾರ್ಯವನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಗುರುವಾರ ಮಧ್ಯಾಹ್ನ ಕೊನೆಗೊಳಿಸಿದ್ದಾರೆ.
ಇದೇ ವೇಳೆ ಕೊಪ್ಪಳದ ಕೋಳಿ ಫಾರ್ಮ್ ಒಂದರಲ್ಲಿ ನಡೆಸುತ್ತಿದ್ದ ಶೋಧವನ್ನೂ ಇ.ಡಿ ಅಧಿಕಾರಿಗಳು ಪೂರ್ಣಗೊಳಿಸಿದ್ದಾರೆ.
30ಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ಅಧಿಕಾರಿಗಳು ಬುಧವಾರ ಬೆಳಿಗ್ಗೆ ಶೋಧಕಾರ್ಯ ಆರಂಭಿಸಿದ್ದರು. ತಮಕೂರಿನ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಧ್ಯಾಹ್ನ 1.30ಕ್ಕೆ, ಹೆಗ್ಗೆರೆಯ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ನೆಲಮಂಗಲದ ಟಿ.ಬೇಗೂರಿನಲ್ಲಿರುವ ವೈದ್ಯಕೀಯ ಕಾಲೇಜಿನಲ್ಲಿ ಮಧ್ಯಾಹ್ನ 3.30ರ ವೇಳೆಗೆ ಶೋಧಕಾರ್ಯ ಮುಗಿಸಿದರು.
‘ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಬ್ಯಾಂಕ್ ವಹಿವಾಟು, ಹಣಕಾಸಿಗೆ ಸಂಬಂಧಿಸಿದ ಲೆಕ್ಕಪತ್ರ, ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿದರು. ಇ.ಡಿಯ ಕೇಂದ್ರ ಕಚೇರಿಯಿಂದ ಬರುತ್ತಿದ್ದ ಸೂಚನೆಯ ಅನುಸಾರ ಅಧಿಕಾರಿಗಳು ದಾಖಲೆ ಪತ್ರಗಳನ್ನು ಕೇಳಿ ಪಡೆದುಕೊಂಡರು. ದಾಖಲೆಗಳ ಪರಿಶೀಲನೆ ವೇಳೆ ಸಿಬ್ಬಂದಿಯಿಂದ ವಿವರಣೆ, ಸ್ಪಷ್ಟನೆ ಕೇಳಿದರು’ ಎಂದು ಮೂಲಗಳು ತಿಳಿಸಿವೆ.
‘ಇ.ಡಿ ಅಧಿಕಾರಿಗಳು ಕೆಲ ದಾಖಲೆಗಳು, ಹಾರ್ಡ್ ಡಿಸ್ಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. 2019ರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ಶೋಧ ಕಾರ್ಯದ ಬಗ್ಗೆಯೂ ಮಾಹಿತಿ ಕೇಳಿದರು’ ಎಂದು ಮೂಲಗಳು ಹೇಳಿವೆ.
‘ಶಿಕ್ಷಣ ಸಂಸ್ಥೆಯ ಬ್ಯಾಂಕ್ ಖಾತೆಗಳಿಂದ ಭದ್ರತಾ ಏಜೆನ್ಸಿ, ಕಟ್ಟಡ ಒಳಾಂಗಣ ವಿನ್ಯಾಸ ಕಂಪನಿಯ ಖಾತೆಗೆ ಹಣ ವರ್ಗಾವಣೆ ಆಗಿದೆ. ಆದರೆ ಆ ಹಣವನ್ನು ಏಕೆ ವರ್ಗಾವಣೆ ಮಾಡಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಹೇಳುವ ದಾಖಲೆಗಳು ಲೆಕ್ಕಪತ್ರಗಳಲ್ಲಿ ಇಲ್ಲ. ಈ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಇ.ಡಿ ಮೂಲಗಳು ಮಾಹಿತಿ ನೀಡಿವೆ.
ದಾಖಲೆ ಎಲ್ಲಿದೆ: ಪರಮೇಶ್ವರ ಪ್ರಶ್ನೆ
‘ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲೇ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಶೋಧ ನಡೆಸಲಾಗಿದೆ ಎಂದು ನಿಮಗೆ ಹೇಳಿದವರು ಯಾರು’ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ಸುದ್ದಿಗಾರರನ್ನು ಪ್ರಶ್ನಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು ‘ಈ ಬಗ್ಗೆ ಅಧಿಕೃತ ದಾಖಲೆ ಅಥವಾ ವರದಿ ಇದೆಯೇ? ಅರ್ಧಿಕೃತವಾಗಿ ಇಲ್ಲದೇ ಇರುವ ಯಾವ ವಿಚಾರದ ಬಗ್ಗೆಯೂ ನಾನು ಉತ್ತರಿಸುವುದಿಲ್ಲ. ಇ.ಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ತನಿಖೆ ನಡೆಸಿ ವರದಿ ನೀಡಲಿ. ಆನಂತರ ಮಾತನಾಡುತ್ತೇನೆ’ ಎಂದರು.
ರನ್ಯಾ ರಾವ್ ಅವರ ಕ್ರೆಡಿಟ್ ಕಾರ್ಡ್‌ಗೆ ನಿಮ್ಮ ಶಿಕ್ಷಣ ಸಂಸ್ಥೆಯಿಂದ ₹40 ಲಕ್ಷ ವರ್ಗಾವಣೆ ಆಗಿದೆ ಎಂದು ಸುದ್ದಿಗಾರರು ಪ್ರಶ್ನಿಸಿದಾಗ ‘ಇದಕ್ಕೆ ಸಂಬಂಧಿಸಿದ ದಾಖಲೆ ನಿಮ್ಮ ಬಳಿ ಇದೆಯೇ? ಇದ್ದರೆ ತೋರಿಸಿ’ ಎಂದರು.
‘ಇ.ಡಿ ಅಧಿಕಾರಿಗಳು ಕೇಳಿದ ಎಲ್ಲ ದಾಖಲೆ ಕೊಡಲು ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಎರಡನೇ ದಿನವೂ ಪರಿಶೀಲನಾ ಕಾರ್ಯ ಮುಂದುವರಿದಿದೆ. ಅವರ ಉದ್ದೇಶ ಗೊತ್ತಿಲ್ಲ. ಮೊದಲಿನಿಂದಲೂ ಕಾನೂನಿಗೆ ಗೌರವಕೊಟ್ಟುಕೊಂಡು ಬಂದಿದ್ದೇನೆ. ಕಾನೂನು ಎಲ್ಲರಿಗೂ ಒಂದೇ. ತನಿಖೆಗೆ ಸಹಕಾರ ನೀಡುತ್ತೇನೆ’ ಎಂದರು.
‘ಸಿದ್ದಾರ್ಥ ಶಿಕ್ಷಣ ಸಂಸ್ಥೆಗೆ 68 ವರ್ಷಗಳಾಗಿವೆ. ಎರಡು ವೈದ್ಯಕೀಯ ಕಾಲೇಜು ಎಂಜಿನಿಯರಿಂಗ್ ಕಾಲೇಜುಗಳಿವೆ. ಇದುವರೆಗೆ 40 ಸಾವಿರ ಎಂಜಿನಿಯರ್‌ಗಳು 10 ಸಾವಿರ ವೈದ್ಯರನ್ನು ರೂಪಿಸಲಾಗಿದೆ. ಮಾಜಿ ಶಾಸಕ ಶಫಿ ಅಹಮದ್ ಅವರಿಗೆ ಸೇರಿದ ಎಚ್‌ಎಂಎಸ್ ಎಂಜಿನಿಯರಿಂಗ್ ಕಾಲೇಜು ನಷ್ಟದಲ್ಲಿದ್ದ ಕಾರಣ ನಮ್ಮ ಸಂಸ್ಥೆಗೆ ನೀಡಿದ್ದಾರೆ. ನಮ್ಮ ತಂದೆ ಸೇರಿದಂತೆ ಹಿರಿಯರು ಕಟ್ಟಿದ ಸಂಸ್ಥೆಯನ್ನು ಬೆಳೆಸುವುದೇ ತಪ್ಪಾ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.