
ಬೆಂಗಳೂರು: ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಕಬ್ಬಿಣದ ಅದಿರಿನ ಗಣಿಗಾರಿಕೆ ನಡೆಸುತ್ತಿರುವ ಶಾಂತೇಶ್ ಗುರೆಡ್ಡಿ ಕುಟುಂಬದ ಶ್ರೀ ಕುಮಾರಸ್ವಾಮಿ ಮಿನರಲ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್ ನಿಯಮಬಾಹಿರವಾಗಿ ವಿದೇಶಗಳಿಗೆ ಹಣ ರವಾನೆ ಮಾಡಿದ ಪ್ರಕರಣದಲ್ಲಿ ಲಂಡನ್‌ನ ₹61.73 ಕೋಟಿ ಮೌಲ್ಯದ ಸ್ವತ್ತನ್ನು ಜಾರಿ ನಿರ್ದೇಶನಾಲಯ(ಇ.ಡಿ) ಸ್ವಾಧೀನಪಡಿಸಿಕೊಂಡಿದೆ.
ಭಾರತೀಯ ಖನಿಜ ಕೈಗಾರಿಕೆಗಳ ಒಕ್ಕೂಟದ ಅಧ್ಯಕ್ಷರೂ ಆಗಿರುವ ಶಾಂತೇಶ್ ಗುರೆಡ್ಡಿ ಅವರು ಶ್ರೀ ಕುಮಾರಸ್ವಾಮಿ ಮಿನರಲ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್‌ನ ನಿರ್ದೇಶಕರಾಗಿದ್ದಾರೆ. ಕಂಪನಿಯು ಆದಾಯ ತೆರಿಗೆ ವಂಚಿಸಿರುವ ಆರೋಪದಲ್ಲಿ ಆದಾಯ ತೆರಿಗೆ ಇಲಾಖೆಯು ಪ್ರಕರಣ ದಾಖಲಿಸಿಕೊಂಡಿತ್ತು. ಅದರ ಆಧಾರದಲ್ಲೇ ಇ.ಡಿ ಸಹ ಪ್ರಕರಣ ದಾಖಲಿಸಿಕೊಂಡಿತ್ತು.
‘ಈ ಕಂಪನಿಯು ಕಬ್ಬಿಣದ ಅದಿರು ರಫ್ತು ಮಾಡುವಲ್ಲಿ ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ (ಫೆಮಾ) ಉಲ್ಲಂಘಿಸಿದೆ. ಕಂಪನಿಯು ಭಾರತದಿಂದ ರಫ್ತು ಮಾಡಿದ ಅದಿರಿಗೆ ಪೂರ್ಣ ಪ್ರಮಾಣದ ಹಣವನ್ನು ಪಡೆದಿಲ್ಲ. ಬದಲಿಗೆ ವಿದೇಶಗಳಲ್ಲಿ ಇರುವ ಕೆಲ ಕಂಪನಿಗಳ ಖಾತೆಗೆ ‘ಕಮಿಷನ್’ನ ಹೆಸರಿನಲ್ಲಿ ಹಣವನ್ನು ವರ್ಗಾಯಿಸಲಾಗಿದೆ. ಆ ಎಲ್ಲ ಕಂಪನಿಗಳಲ್ಲಿ ಕಂಪನಿಯ ನಿರ್ದೇಶಕರಾದ ಶಾಂತೇಶ್ ಗುರೆಡ್ಡಿ, ಜ್ಯೋತಿ ಗುರೆಡ್ಡಿ ಅವರು ಆಡಳಿತ ಮಂಡಳಿ ಸದಸ್ಯರು ಹಾಗೂ ಷೇರುದಾರರಾಗಿದ್ದಾರೆ’ ಎಂದು ಇ.ಡಿ ಹೇಳಿದೆ.
‘ಕಂಪನಿ, ಶಾಂತೇಶ್ ಮತ್ತು ಜ್ಯೋತಿ ಅವರ ಹೆಸರಿನಲ್ಲಿ ವಿದೇಶಗಳಲ್ಲಿ ಹತ್ತಾರು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಶಾಂತೇಶ್ ಅವರ ಮಗಳು ನೀತಿ ಗುರೆಡ್ಡಿ ಹೆಸರಿನಲ್ಲಿ ಲಂಡನ್‌ನಲ್ಲಿ ಒಂದು ಕಂಪನಿ ಕಾರ್ಯನಿರ್ವಹಿಸುತ್ತಿದ್ದು, ಆ ಕಂಪನಿಯ ಖಾತೆಗೆ ಹಣ ವರ್ಗಾಯಿಸಲಾಗಿತ್ತು. ಆ ಹಣದಿಂದ ಲಂಡನ್‌ನಲ್ಲಿ ಖರೀದಿಸಲಾಗಿದ್ದ ₹61.73 ಕೋಟಿ ಮೌಲ್ಯದ ವಿಲ್ಲಾವನ್ನು ಸ್ವಾಧೀನಕ್ಕೆ ಪಡೆಯಲಾಗಿದೆ’ ಎಂದು ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.