ಬೆಂಗಳೂರು: ಐಶ್ವರ್ಯಾಗೌಡ ಅವರು ₹9.82 ಕೋಟಿ ಮೊತ್ತದ ಚಿನ್ನಾಭರಣ ವಂಚಿಸಿದ ಪ್ರಕರಣದಲ್ಲಿ ಕಾಂಗ್ರೆಸ್‌ನ ಮಾಜಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ.
‘ಡಿ.ಕೆ.ಸುರೇಶ್ ಅವರ ನಿವಾಸಕ್ಕೆ ಮಂಗಳವಾರ ಮಧ್ಯಾಹ್ನ ತೆರಳಿದ್ದರು. ಆಗ ಸುರೇಶ್ ಅವರು ಮನೆಯಲ್ಲಿ ಇರಲಿಲ್ಲ. ಆದರೆ ಕೆಲವೇ ನಿಮಿಷಗಳಲ್ಲಿ ವಾಪಸಾದರು. ಅವರಿಗೆ ಸಮನ್ಸ್ ನೀಡಿದ ಅಧಿಕಾರಿಗಳು, ಇದೇ 19ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದರು’ ಎಂದು ಮೂಲಗಳು ಖಚಿತಪಡಿಸಿವೆ.
‘ಐಶ್ವರ್ಯಾಗೌಡ ಅವರು ಚಿನ್ನ ಮತ್ತು ಹಣ ಹೂಡಿಕೆಗೆ ದುಪ್ಪಟ್ಟು ಲಾಭ ಕೊಡಿಸುತ್ತೇನೆ ಎಂದು ಹೇಳಿ ಹಲವು ಚಿನ್ನಾಭರಣ ವ್ಯಾಪಾರಿಗಳಿಂದ ಚಿನ್ನ ಪಡೆದುಕೊಂಡಿದ್ದರು. ಆದರೆ ಹಣವನ್ನೂ ನೀಡಿಲ್ಲ, ಚಿನ್ನವನ್ನೂ ವಾಪಸ್ ಮಾಡಿಲ್ಲ’ ಎಂದು ಕೆಲ ಚಿನ್ನಾಭರಣ ವ್ಯಾಪಾರಿಗಳು ಪೊಲೀಸರಿಗೆ ದೂರು ನೀಡಿದ್ದರು. ‘ಹಣ ವಾಪಸ್ ಕೇಳಿದಾಗ, ತಾನು ಡಿ.ಕೆ.ಸುರೇಶ್ ಅವರ ಸೋದರಿ ಎಂದು ಹೇಳಿ ಬೆದರಿಕೆ ಹಾಕಿದ್ದರು’ ಎಂದೂ ದೂರಿನಲ್ಲಿ ವಿವರಿಸಿದ್ದರು.
‘ನನ್ನ ಹೆಸರನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ’ ಎಂದು ಡಿ.ಕೆ.ಸುರೇಶ್ ಅವರು ಸಹ ಪೊಲೀಸರಿಗೆ ದೂರು ನೀಡಿದ್ದರು.
ಐಶ್ವರ್ಯಗೌಡ ವಿರುದ್ಧ ದಾಖಲಾಗಿದ್ದ ದೂರಿನ ಸಂಬಂಧ ಇ.ಡಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ತನಿಖೆಯ ಭಾಗವಾಗಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ, ಕೆಲ ಉದ್ಯಮಿಗಳು ಮತ್ತು ಐಶ್ವರ್ಯ ಅವರ ಮನೆಯಲ್ಲಿ ಇ.ಡಿ ಅಧಿಕಾರಿಗಳು ಈಚೆಗೆ ಶೋಧ ನಡೆಸಿದ್ದರು. ಐಶ್ವರ್ಯ ಅವರ ಮನೆಯಿಂದ ₹2.25 ಕೋಟಿ ನಗದು ವಶಕ್ಕೆ ಪಡೆದಿದ್ದರು.
‘ತಮ್ಮಲ್ಲಿ ಹೂಡಿಕೆ ಮಾಡಿದವರು ಹಣವನ್ನು ವಾಪಸ್ ಕೇಳಿದಾಗ ಐಶ್ವರ್ಯ ಅವರು ರಾಜ್ಯದ ಕೆಲ ಪ್ರಭಾವಿ ರಾಜಕಾರಣಿಗಳ ಹೆಸರು ಬಳಸಿಕೊಂಡಿದ್ದಾರೆ. ಕೆಲ ರಾಜಕಾರಣಿಗಳ ಜತೆ ಐಶ್ವರ್ಯ ಸಂಪರ್ಕದಲ್ಲಿ ಇದ್ದುದಕ್ಕೆ ಮತ್ತು ಅವರೊಂದಿಗೆ ಹಣಕಾಸು ವ್ಯವಹಾರ ನಡೆಸಿರುವುದಕ್ಕೆ ಸಾಕ್ಷ್ಯಗಳು ದೊರೆತಿವೆ. ವಂಚನೆಯಲ್ಲಿ ರಾಜಕಾರಣಿಗಳ ಪಾತ್ರ ಇದೆಯೇ ಎಂಬ ದಿಕ್ಕಿನಲ್ಲಿ ತನಿಖೆ ನಡೆಸಲಾಗುತ್ತಿದೆ’ ಎಂದು ಇ.ಡಿ ಮೂಲಗಳು ತಿಳಿಸಿದ್ದವು.
‘ಸೋಮವಾರ ವಿಚಾರಣೆಗೆ ಹೋಗುತ್ತೇನೆ’
‘ವಿಚಾರಣೆಗೆ ಬನ್ನಿ ಎಂದು ಇ.ಡಿ ಅಧಿಕಾರಿಗಳು ಸಮನ್ಸ್ ನೀಡಿರುವುದು ನಿಜ. ಅವರು ಮಧ್ಯಾಹ್ನ 12.30ಕ್ಕೆ ಮನೆಗೆ ಬಂದಿದ್ದರು. ನಾನು ಮನೆಯಲ್ಲಿ ಇರಲಿಲ್ಲ. ವಾಪಸಾದ ನಂತರ ಅವರನ್ನು ಭೇಟಿ ಮಾಡಿದೆ. ಸಮನ್ಸ್ ನೀಡಿದರು’ ಎಂದು ಡಿ.ಕೆ.ಸುರೇಶ್ ಅವರು ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು ‘ಐಶ್ವರ್ಯಗೌಡ ಪ್ರಕರಣದಲ್ಲಿ ಇದೇ 19ಕ್ಕೆ ವಿಚಾರಣೆಗೆ ಬನ್ನಿ ಎಂದು ಸಮನ್ಸ್‌ನಲ್ಲಿ ಇತ್ತು. ಅಂದು ಪೂರ್ವನಿಗದಿತ ಕಾರ್ಯಕ್ರಮ ಇದ್ದು ಸೋಮವಾರ ಬರುತ್ತೇನೆ ಎಂದು ತಿಳಿಸಿದ್ದೇನೆ’ ಎಂದರು. ‘ನನ್ನ ವ್ಯವಹಾರಗಳೆಲ್ಲವೂ ಸಾರ್ವಜನಿಕವಾಗಿಯೇ ಇದೆ. ನನಗೆ ಐಶ್ವರ್ಯಗೌಡ ಪರಿಚಯವಿಲ್ಲ. ಯಾವುದೋ ಒಂದೆರಡು ಕಾರ್ಯಕ್ರಮಗಳಲ್ಲಿ ಭೇಟಿಯಾಗಿರಬಹುದು. ನನ್ನ ತಂಗಿ ಎಂದು ಹೇಳಿಕೊಂಡು ವಂಚಿಸಿದ್ದಾರೆ ಎಂಬ ದೂರು ಇದೆ. ಆ ಬಗ್ಗೆ ನಾನೂ ಸಹ ದೂರು ನೀಡಿದ್ದೇನೆ’ ಎಂದರು.
ತನಿಖೆಗೆ ಸಹಕರಿಸುತ್ತೇವೆ–ಡಿಕೆಶಿ
‘ಇಡಿ ವಿಚಾರಣೆಗೆ ಡಿ.ಕೆ.ಸುರೇಶ್ ಹಾಜರಾಗಿ ತಮ್ಮ ಹೇಳಿಕೆ ನೀಡಲಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ಐಶ್ವರ್ಯಾ ಗೌಡ ಅವರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ. ಸುರೇಶ್ ಅವರಿಗೆ ಇಡಿ ಸಮನ್ಸ್ ನೀಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್ ‘ಸುರೇಶ್ ತಂಗಿ ಎಂದು ಹೇಳಿಕೊಂಡು ಮೋಸ ಮಾಡಿರುವ ಬಗ್ಗೆ ವಂಚನೆಗೆ ಒಳಗಾಗಿರುವ ಮೂರು ನಾಲ್ಕು ಜನರು ನನ್ನ ಬಳಿ ಹೇಳಿದ್ದಾರೆ. ಅಪರಿಚಿತರು ನಮ್ಮ ಹೆಸರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆಂದು ಪೊಲೀಸರಿಗೆ ಸುರೇಶ್ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಲು ನಾವೂ ಹೇಳಿದ್ದೇವೆ’ ಎಂದರು. ‘ಈ ದೇಶದ ಕಾನೂನಿಗೆ ವಿಚಾರಣೆಗಳಿಗೆ ನಾವು ಗೌರವ ನೀಡುತ್ತೇವೆ. ಮೋಸ ಮಾಡುವ ವ್ಯಕ್ತಿಗಳ ವಿರುದ್ಧದ ತನಿಖೆಗೆ ಸಹಕಾರ ನೀಡಲು ಬದ್ಧರಾಗಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.