ADVERTISEMENT

6–8ನೇ ತರಗತಿಯ ವೇಳಾಪಟ್ಟಿ ಪ್ರಕಟ: ಕೋವಿಡ್‌ ಮಾರ್ಗಸೂಚಿ ಪಾಲನೆ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 19:40 IST
Last Updated 31 ಆಗಸ್ಟ್ 2021, 19:40 IST
6ರಿಂದ 8ನೇ ತರಗತಿವರೆಗಿನ ತರಗತಿಗಳು ಆರಂಭಗೊಳ್ಳುತ್ತಿರುವ ಬಗ್ಗೆ ಬೆಂಗಳೂರಿನ ಕಸ್ತೂರ್ಬಾನಗರದಲ್ಲಿರುವ ಶಾಲೆಯೊಂದರ ಮುಂಭಾಗದಲ್ಲಿ ಹಾಕಿರುವ ಫಲಕ –ಪ್ರಜಾವಾಣಿ ಚಿತ್ರ
6ರಿಂದ 8ನೇ ತರಗತಿವರೆಗಿನ ತರಗತಿಗಳು ಆರಂಭಗೊಳ್ಳುತ್ತಿರುವ ಬಗ್ಗೆ ಬೆಂಗಳೂರಿನ ಕಸ್ತೂರ್ಬಾನಗರದಲ್ಲಿರುವ ಶಾಲೆಯೊಂದರ ಮುಂಭಾಗದಲ್ಲಿ ಹಾಕಿರುವ ಫಲಕ –ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ 6ರಿಂದ 8ನೇ ತರಗತಿಗಳನ್ನು ಇದೇ 6ರಿಂದ ಆರಂಭಿಸುವ ಸಂಬಂಧವೇಳಾಪಟ್ಟಿ ಸಹಿತ ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳವಾರ ಸುತ್ತೋಲೆ ಹೊರಡಿಸಿದೆ.

ಶಾಲಾ ಮಕ್ಕಳ ಭೌತಿಕ ತರಗತಿಗೆ ಅನುಗುಣವಾಗಿ ಪ್ರತಿ ಶಾಲೆಯಲ್ಲೂ ತಂಡ ರಚಿಸಬೇಕು. ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಪ್ರತ್ಯೇಕವಾಗಿರುವ ಕಡೆಗಳಲ್ಲಿ 6ರಿಂದ 8ನೇ ತರಗತಿಗಳನ್ನು ಬೆಳಿಗ್ಗೆ (10 ಗಂಟೆಯಿಂದ 1.30ರವರೆಗೆ) ನಡೆಸಬೇಕು.

ಪ್ರೌಢ ಶಾಲೆಯ ಜೊತೆಗೆ 8ನೇ ತರಗತಿ ಇರುವ ಶಾಲೆಗಳಲ್ಲಿ 8ನೇ ತರಗತಿಯನ್ನು ಮಧ್ಯಾಹ್ನ 2 ಗಂಟೆಯಿಂದ ಸಂಜೆ 4.30ರವರೆಗೆ 45 ನಿಮಿಷಗಳ ಮೂರು ಅವಧಿ ನಡೆಸಬೇಕು ಎಂದು ಇಲಾಖೆ ಸಲಹೆ ನೀಡಿದೆ.

ADVERTISEMENT

ಅಂತರ ಕಾಪಾಡಿಕೊಳ್ಳಲು ಅನುಕೂಲ ಆಗುವಂತೆ ಪ್ರತಿ ಶಾಲೆಯಲ್ಲೂ ಮಕ್ಕಳ ಸಂಖ್ಯೆಗೆ ಅನುಗುಣವಾಗಿ 15ರಿಂದ 20 ಮಕ್ಕಳನ್ನು ಒಳಗೊಂಡಿರುವ ತಂಡ ರಚಿಸಬೇಕು. ಕೇರಳದ ಗಡಿಭಾಗಕ್ಕೆ ಹೊಂದಿಕೊಂಡಿರುವ ತಾಲ್ಲೂಕು, ವಲಯಗಳಲ್ಲಿ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ಶಾಲೆ ಆರಂಭಿಸಬೇಕು ಎಂದು ಸೂಚಿಸಿದೆ.

ಶಾಲೆಗಳಲ್ಲಿ ಹಾಜರಾತಿ ಕಡ್ಡಾಯವಲ್ಲ. ಬದಲಾಗಿ ಆನ್‌ಲೈನ್ ಅಥವಾ ಭೌತಿಕ ತರಗತಿಗಳಲ್ಲಿ ಯಾವುದಾದರು ಒಂದು ವ್ಯವಸ್ಥೆಯಲ್ಲಿ ಮಕ್ಕಳು ಕಲಿಕೆ ಮುಂದುವರಿಸಬೇಕು. ಈ ಹಿಂದೆ ನೀಡಿರುವ ಕೋವಿಡ್‌ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದೂ ಇಲಾಖೆ ನಿರ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.